ರಾಮನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ಮಾಡಲು 10ರಿಂದ 15 ಕೋಟಿ ರುಪಾಯಿ ಖರ್ಚಾಗಿದೆ. ಈ ಸ್ಟಿಂಗ್ ಆಪರೇಷನ್ ಮಾಡಿದವರು ಮತ್ತು ಮಾಡಿಸಿದವರು ಯಾರೆಂದು ಬಹಿರಂಗವಾದರೆ ಕೋಲಾಹಲ ಸೃಷ್ಟಿಯಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು

ರಾಮನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ಮಾಡಲು 10ರಿಂದ 15 ಕೋಟಿ ರುಪಾಯಿ ಖರ್ಚಾಗಿದೆ. ಈ ಸ್ಟಿಂಗ್ ಆಪರೇಷನ್ ಮಾಡಿದವರು ಮತ್ತು ಮಾಡಿಸಿದವರು ಯಾರೆಂದು ಬಹಿರಂಗವಾದರೆ ಕೋಲಾಹಲ ಸೃಷ್ಟಿಯಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಗೆ ಅಷ್ಟೊಂದು ಹಣ ಕೊಟ್ಟವರು ಯಾರು. ಆ ಕಪ್ಪು ಹಣ ಎಲ್ಲಿಂದ ಬಂದಿತು. ಅದರ ಹಿಂದೆ ಮಹಾನಾಯಕರಿದ್ದಾರೊ, ಚೋಟಾ ನಾಯಕರಿದ್ದಾರೊ ಗೊತ್ತಿಲ್ಲ. ಅದು ತನಿಖೆಯಾಗಿ ಯಾರೆಂಬುದು ಬಹಿರಂಗವಾದರೆ ಅಲ್ಲೋಲ, ಕಲ್ಲೋಲ ಆಗಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿ ಹುಳ ಬಿಟ್ಟರು. ಕ್ಯಾಬಿನೆಟ್ ನಲ್ಲಿ ಪ್ರಸ್ತಾಪವಾದ ವಿಷಯ ಸರ್ಕಾರಿ ದಾಖಲೆ. ಆ ವಿಚಾರವನ್ನು ಪ್ರಸ್ತಾಪ ಮಾಡಿ ಈಗ ಯಾಕೆ ಸುಮ್ಮನಿದ್ದಾರೆ. ಗೃಹ ಸಚಿವರಿಗೆ ಜ್ಞಾನ ಇದ್ದಿದ್ದರೆ ಎಫ್‌ಐಆರ್ ಮಾಡಿಸಬೇಕಿತ್ತು.

ಈಗ ಕೊಟ್ಟಿರುವ ದೂರಿನಲ್ಲಿ ಏನು ಇಲ್ಲ. ಆ ವಿಡಿಯೋವನ್ನು ಯಾರು ಹಂಚಿಕೆ ಮಾಡಿದರು ಎಂಬುದಷ್ಟೇ ಇದೆ. ಆ ವಿಡಿಯೋ ಯಾರು ಹಂಚಿಕೆ ಮಾಡಿದರು ಎಂಬುದು ಮುಖ್ಯವಲ್ಲ. ಯಾರು ಮಾಡಿದರು ಮತ್ತು ಮಾಡಿಸಿದರು ಎಂಬುದು ಮುಖ್ಯ. ಆ ನಾಯಕನ ಹೆಸರು ಬಹಿರಂಗವಾದರೆ ಜನರು ಆ ಪಾರ್ಟಿಯ ಗಂಟು ಮೂಟೆ ಕಟ್ಟಿ ಓಡಿಸುತ್ತಾರೆ ಎಂದು ಅಶೋಕ್ ಹೇಳಿದರು.

ಒಂದೆಡೆ ಕಿತ್ತು ತಿನ್ನುವ ಬರಗಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವಿಶೇಷ ಚೇತನರು 5 ತಿಂಗಳಿಂದ ಮಾಸಾಶನ ಕೊಟ್ಟಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ನಿಗಮ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡದ ಕಾರಣ ಬಡವರಿಗೆ ಸಾಲ ಕೊಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಎಲ್ಲ ಬೆಲೆಗಳನ್ನು ಹೆಚ್ಚಳ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಹ ಏರಿಕೆ ಮಾಡಿದ್ದರು. ಈಗ ಡಿ.ಕೆ.ಶಿವಕುಮಾರ್ ಬಂದ ಮೇಲೆ ಇನ್ನೂ ಹೆಚ್ಚಾಗಿದೆ. ಯಾವುದನ್ನು ಬಿಡುತ್ತಿಲ್ಲ. ಇವರು ಎಲ್ಲದರಲ್ಲಿಯೂ ಬೆಲೆ ಹೆಚ್ಚಳ ಮಾಡುತ್ತಿದ್ದಾರೆ. ಈ ವಿಚಾರಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸ್ಟಿಂಗ್ ಆಪರೇಷನ್ ವಿಚಾರ ಮುನ್ನಲೆಗೆ ತಂದಿದ್ದಾರೆ ಎಂದು ಅಶೋಕ್ ಟೀಕಿಸಿದರು.

16ಕೆಆರ್ ಎಂಎನ್ 7.ಜೆಪಿಜಿ

ವಿಪಕ್ಷ ನಾಯಕ ಆರ್.ಅಶೋಕ್