ರೇಣುಕಾಸ್ವಾಮಿ ಕುಟುಂಬಕ್ಕೆ ಕೋಟಿ ರು. ಪರಿಹಾರಕ್ಕೆ ಆಗ್ರಹ

| Published : Jun 14 2024, 01:03 AM IST

ರೇಣುಕಾಸ್ವಾಮಿ ಕುಟುಂಬಕ್ಕೆ ಕೋಟಿ ರು. ಪರಿಹಾರಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಗುರುವಾರ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ಕೊಟ್ಟು ಪೋಷಕರಿಗೆ ಸಾಂತ್ವನ ಹೇಳಿದರು.

ನೊಂದ ಕುಟುಂಬಕ್ಕೆ ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಸಾಂತ್ವನ । ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಸಲಹೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗದರ್ಶನ್ ಗ್ಯಾಂಗ್‌ನಿ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಕುಟುಂಬಕ್ಕೆ ಕೋಟಿ ರು. ಪರಿಹಾರ ಕೊಟ್ಟು, ಪತಿ ಸಹಾನಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ವಿಧಾನ ಪರಿಷತ್ತು ಮುಖ್ಯ ಸಚೇತಕ ರವಿಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗುರುವಾರ ರೇಣುಕಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ದುಃಖತಪ್ತರಾಗಿದ್ದ ಪೋಷಕರು, ಪತ್ನಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಸ್ವಾಮಿಯರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿದೆ. ಯಾವ ರೌಡಿಗಳೂ ಇಷ್ಟು ಹೀನಾಯವಾಗಿ ಹತ್ಯೆ ಮಾಡುವುದಿಲ್ಲ. ಇಷ್ಟಾದರೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ಮೃತನ ಕುಟುಂಬದವರಿಗೆ ಕನಿಷ್ಟ ಪಕ್ಷ ಕರೆ ಕೂಡ ಮಾಡಿಲ್ಲ. ಸಾಂತ್ವನ ಹೇಳುವ ಉಸಾಬರಿಗೆ ಹೋಗಿಲ್ಲ. ಇದರಿಂದ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂಬ ಅನುಮಾನ ಮೂಡುತ್ತದೆ ಎಂದರು.

ಶನಿವಾರ ರೇಣುಕಾಸ್ವಾಮಿಯವರನ್ನು ಬೆಂಗಳೂರಿಗೆ ಕರೆದೊಯ್ದು ಶೆಡ್‍ನಲ್ಲಿ ಕೂಡಿ ಹಾಕಲಾಗಿದೆ. ಬಳಿಕ ಮನ ಬಂದಂತೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದು, ಆತ ಎಷ್ಟು ಚೀರಾಡಿದರೂ ಹಿಂಸೆ ನೀಡುವುದುನ್ನು ನಿಲ್ಲಿಸಿಲ್ಲ. ಆತನಿಗೆ ಮದುವೆಯಾಗಿ ಇನ್ನೂ ಒಂದು ವರ್ಷ ತುಂಬಿಲ್ಲ. ಪತ್ನಿ ಐದು ತಿಂಗಳ ಗರ್ಭಿಣಿ. ಈಗ ಅವರ ಮುಂದಿನ ಜೀವನದ ಗತಿಯೇನು? ರಾಜ್ಯದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದು.

ರೇಣುಕಾಸ್ವಾಮಿ ಪತ್ನಿಗೆ ಇನ್ನೂ 26 ವರ್ಷ ವಯಸ್ಸು. ಚಿಕ್ಕವಯಸ್ಸಿನಲ್ಲಿ ಗಂಡನ ಕಳೆದುಕೊಂಡು ಹೇಗೆ ಬದುಕಬೇಕು. ಸುಖವಾಗಿ ಬದುಕಬೇಕಾದ ವಯಸ್ಸಿನಲ್ಲಿ ಅವರ ಜೀವನ ಹಾಳು ಮಾಡಿದ್ದಾರೆ. ಅವರ ಜೀವನಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ತಪ್ಪಿದಲ್ಲಿ ಈ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುವುದು. ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಲಾಗುವುದು. ಮೃತನ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದರು.

ನಟ ದರ್ಶನ್ ಹೀರೋ ಎನ್ನುವುದಕ್ಕಿಂದ ಆತನನ್ನು ಜೀರೋ ಎಂದೇ ಹೇಳಬೇಕು. ಆತ ಚಿತ್ರರಂಗಕ್ಕೆ ಬಂದು ಒಳ್ಳೆಯದು ಮಾಡಿರುವುದಕ್ಕಿಂತ ಕೆಡುಕು ಮಾಡಿರುವುದೇ ಹೆಚ್ಚು. ಹಾಗಾಗಿ ಆತನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಮುಂದಿನ ದಿನಗಳಲ್ಲಿ ಯಾವುದೇ ಶೂಟಿಂಗ್ ಮಾಡಲು ಅವಕಾಶ ನೀಡಬಾರದು. ರಾಜ್ಯ ಸರ್ಕಾರ ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ನವೀನ್ ಚಾಲುಕ್ಯ, ಕಾಲುವೇಹಳ್ಳಿ ಪಾಲಯ್ಯ, ನಾಗರಾಜ್ ಬೇದ್ರೆ, ಕಿರಣ್, ಯಶವಂತ್ ಮತ್ತಿತರರು ಇದ್ದರು.