ಸಾರಾಂಶ
ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ 69 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮುಂಬೈ ವಿವಿ 71 ಅಂಕಗಳೊಂದಿಗೆ ದ್ವಿತೀಯ ಸ್ಥಾನ, 83 ಅಂಕಗಳೊಂದಿಗೆ ರಾಜಸ್ಥಾನ ವಿವಿ ತೃತೀಯ ಸ್ಥಾನ ಗಳಿಸಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಆಳ್ವಾಸ್ ಕಾಲೇಜಿನಲ್ಲಿ ಬುಧವಾರ ನಡೆದ ಅಖಿಲ ಭಾರತ ಅಂತರ್ ವಿವಿ ಮಹಿಳಾ ಹಾಗೂ ಪುರುಷರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡ ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟ ತನ್ನದಾಗಿಸಿಕೊಂಡಿದೆ.ಪುರುಷರ ತಂಡವು ನಾಲ್ಕನೇ ಬಾರಿ ಸಮಗ್ರ ತಂಡ ಪ್ರಶಸ್ತಿ ಪಡೆದರೆ, ಮಹಿಳೆಯರ ತಂಡವು ಮೂರನೇ ಬಾರಿ ಪ್ರಶಸ್ತಿ ಪಡೆದಿದೆ. ಮಂಗಳೂರು ವಿವಿ ಪ್ರತಿನಿಧಿಸಿದ ಪುರುಷರ ಹಾಗೂ ಮಹಿಳೆಯರ ತಂಡದಲ್ಲಿದ್ದ 12 ಜನ ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದರೆ.
ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ 69 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮುಂಬೈ ವಿವಿ 71 ಅಂಕಗಳೊಂದಿಗೆ ದ್ವಿತೀಯ ಸ್ಥಾನ, 83 ಅಂಕಗಳೊಂದಿಗೆ ರಾಜಸ್ಥಾನ ವಿವಿ ತೃತೀಯ ಸ್ಥಾನ ಗಳಿಸಿತು.ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ 33 ಅಂಕಗಳೊಂದಿಗೆ ಪ್ರಥಮ, 46 ಅಂಕಗಳೊಂದಿಗೆ ಮಹರ್ಷಿದಯಾನಂದ ವಿವಿಯು ದ್ವಿತೀಯ, ಕೋಲ್ಹಾಪುರದ ಶಿವಾಜಿ ಯುನಿವರ್ಸಿಟಿ 64 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯಿತು.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‌ನ ಬಸಂತಿಕುಮಾರಿ ದ್ವಿತೀಯ, ಸೋನಿಯಾ ತೃತೀಯ ಸ್ಥಾನ, ಜ್ಯೋತಿ ಒಂಬತ್ತನೇ ಸ್ಥಾನ, ದಿಶಾ ಬೋರ್ಸೆ 19ನೇ ಸ್ಥಾನ ಪಡೆಯಿತು.ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ನವರತನ್ ಎಂಟನೇ ಸ್ಥಾನ, ಗಗನ್ ಹದಿನೇಳನೆ ಸ್ಥಾನ, ರೋಹಿತ ಹದಿನೆಂಟನೇ ಸ್ಥಾನ, ಅಮನ್ ಕುಮಾರ್ ಇಪ್ಪತ್ತಾರನೇ ಸ್ಥಾನ ಪಡೆದರು.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಸ್ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಅಖಿಲ ಭಾರತ ಅಂತರ್ ವಿವಿ ಮಹಿಳೆಯರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್ ಬುಧವಾರ ನಡೆಯಿತು. ಪುರುಷರ ಅಖಿಲ ಭಾರತ ಅಂತರ್ ವಿವಿ ಗುಡ್ಡಗಾಡು ಓಟವು ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿತ್ತು.ಮಹಿಳಾ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಗಳಿಗೆ ಕ್ರಮವಾಗಿ 25,000, 15000 ಹಾಗೂ 10000 ರುಪಾಯಿ ನಗದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ನೀಡಲಾಯಿತು.ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್. ಧರ್ಮ, ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ದೈಹಿಕ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.