ಇಲ್ಲಿನ ತೆಂಕನಿಡಿಯೂರಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿ ಸಮಗ್ರ ಚಾಂಪಿಯನ್‌ಶಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಉಡುಪಿ: ಇಲ್ಲಿನ ತೆಂಕನಿಡಿಯೂರಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿ ಸಮಗ್ರ ಚಾಂಪಿಯನ್‌ಶಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.ಪುರುಷರ ವಿಭಾಗದಲ್ಲಿ ರಾಜಸ್ಥಾನದ ಜೈಪುರ ವಿವಿ ಪ್ರಥಮ, ಕಲ್ಲಿಕೋಟೆ ವಿವಿ ದ್ವಿತೀಯ ಹಾಗೂ ಮಂಗಳೂರು ವಿವಿ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಹರಿಯಾಣದ ರೋಹ್ಟಕ್‌ ಮಹರ್ಷಿ ದಯಾನಂದ ವಿವಿ ದ್ವಿತೀಯ ಹಾಗೂ ಕೇರಳದ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿ ತೃತೀಯ ಸ್ಥಾನ ಗಳಿಸಿದವು. ಎರಡೂ ವಿಭಾಗಗಳ ಸಾಧನೆಯ ಆಧಾರದಲ್ಲಿ ಮಂಗಳೂರು ವಿವಿ ಸಮಗ್ರ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿತು.ಫಲಿತಾಂಶ ಹೀಗಿದೆ: ಪುರುಷರ 10 ಕಿ.ಮೀ. ಓಟದಲ್ಲಿ ಮುಂಬೈ ವಿವಿ ಸ್ವರಾಜ್ ಸಂದೀಪ್ ಜೋಷಿ ಪ್ರಥಮ, ಮಂಗಳೂರು ವಿವಿಯ ಶೈಲೇಶ್ ಕುಶ್ವಾಹ ದ್ವಿತೀಯ, ಹರಿಯಾಣದ ಮಹರ್ಷಿ ದಯಾನಂದ ವಿವಿಯ ಅವಕಾಶ್ ತೃತೀಯ ಹಾಗೂ ಮೊಹಾಲಿಯ ಸಿಜಿಸಿಯ ದಿನೇಶ್ ನಾಲ್ಕನೇ ಸ್ಥಾನ ಪಡೆದರು.

ಮಹಿಳೆಯರ 10 ಕಿ.ಮೀ. ಓಟದಲ್ಲಿ ಕೇರಳದ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿಯ ರಾಶಿ ಸಿ.ಎಂ. ಪ್ರಥಮ, ಅದೇ ವಿವಿಯ ಜಿನ್ಸಿ ಜಿ. ದ್ವಿತೀಯ, ರಾಜಸ್ಥಾನದ ಬಿಕಾನೇರ್ ಮಹಾರಾಜ ಗಂಗಾಸಿಂಗ್ ವಿವಿಯ ವಂದನಾ ಪಟೇಲ್ ತೃತೀಯ ಹಾಗೂ ಹರಿಯಾಣದ ಮಹರ್ಷಿ ದಯಾನಂದ ವಿವಿಯ ಪೂಜಾ ನಾಲ್ಕನೇ ಸ್ಥಾನ ಗಳಿಸಿದರು.

ಓಟದಲ್ಲಿ ದೇಶದ ವಿವಿಧ ವಿವಿಗಳಿಂದ 850 ಪುರುಷ ಕ್ರೀಡಾಪಟುಗಳು, 650 ಮಹಿಳಾ ಕ್ರೀಡಾಪಟುಗಳು ಹಾಗೂ 100 ಅಧಿಕಾರಿಗಳು ಸೇರಿದಂತೆ ಒಟ್ಟು 1,600 ಮಂದಿ ಭಾಗವಹಿಸಿದ್ದರು.

ಪುರುಷರ 10 ಕಿಮೀ ಓಟಕ್ಕೆ ಶಾಸಕ ಯಶ್‌ಪಾಲ್ ಸುವರ್ಣ, ಮಹಿಳೆಯರ ಓಟಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಚಾಲನೆ ನೀಡಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿವಿ ಕುಲಸಚಿವ ಸಂತೋಷ್ ಬಿ. ಜಗಲಸಾರ್, ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್. ಹಾಗೂ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ವಿವಿಗಳ ಸಂಘದ ವೀಕ್ಷಕ ಡಾ. ಜಯಪ್ರಕಾಶ್, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.