ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಹೊಸವರ್ಷದ ಪ್ರಥಮ ಹಬ್ಬವೆಂದೇ ಕರೆಯಲಾಗುತ್ತಿರುವ ಮಕರ ಸಂಕ್ರಮಣ ದಿನವಾದ ಸೋಮವಾರ ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಆಲಮಟ್ಟಿಗೆ ಆಗಮಿಸಿ ಕೃಷ್ಣೆಯ ಎಡ ಮತ್ತು ಬಲಬದಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿರುವುದು ವಿಶೇಷವಾಗಿತ್ತು.ಮಕರ ಸಂಕ್ರಮಣದ ದಿನದಂದು ಸೂರ್ಯನು ತನ್ನ ಪಥವನ್ನು ಬದಲಾಯಿಸಿ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ವಾಲುತ್ತಾನೆ. ಈ ದಿನದಂದು ಪವಿತ್ರ ಕೃಷ್ಣೆಯಲ್ಲಿ ಎಳ್ಳು ಮೈಗೆ ಹಚ್ಚಿಕೊಂಡು ಮಿಂದೆದ್ದು ಉಳಿದವರಿಗೂ ಎಳ್ಳನ್ನು ಹಂಚಿ ದೇವಸ್ಥಾನಗಳಿಗೆ ತೆರಳಿ ದೇವರುಗಳ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಲಿಂಗಭೆದವಿಲ್ಲದೇ ಶಾಸ್ತ್ರಿ ಜಲಾಶಯದ ಹಿನ್ನೀರು ಹಾಗೂ ಮುನ್ನೀರು ಪ್ರದೇಶಗಳಾಗಿರುವ ಪಾರ್ವತಿ ಕಟ್ಟೆ ಸೇತುವೆ ಕೆಳಭಾಗ, ಚಂದ್ರಮ್ಮಾದೇವಿ ದೇವಸ್ಥಾನದ ಬಳಿ, ಕೃಷ್ಣಾ ಸೇತುವೆಗಳ ಕೆಳಭಾಗದಲ್ಲಿ, ಸೀತಿಮನಿ, ಮನಹಳ್ಳಿ, ಯಲಗೂರ, ಯಲ್ಲಮ್ಮನ ಬೂದಿಹಾಳಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪವಿತ್ರ ಸ್ನಾನ ಮಾಡಿದರು.
ಸ್ಥಳಾಭಾವ: ದೂರದ ಊರುಗಳಿಂದ ಆಗಮಿಸಿದ್ದ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಲು ಪಾರ್ಕ್‌ನಲ್ಲಿ ಸ್ಥಳಾವಕಾಶ ಸಿಗದೇ ಇರುವುದರಿಂದ ಲಾಲ್‌ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ಜಲಾಶಯದ ಕಟ್ಟಡದ ವೃತ್ತದವರೆಗೂ ರಸ್ತೆಗಳ ಎರಡೂ ಬದಿಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ತಮ್ಮ ಮಕ್ಕಳನ್ನು ವಾಹನದಿಂದ ಕೆಳಗಿಳಿಸಲು ಹಿಂದೊಮ್ಮೆ ಮುಂದೆಯೊಮ್ಮೆ ನೋಡಿಯೇ ಕೆಳಗಿಳಿಸಿ ಉದ್ಯಾನಗಳನ್ನು ವೀಕ್ಷಿಸಲು ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.ಪ್ರವಾಸಿ ತಾಣ ಆಲಮಟ್ಟಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗಬಾರದೆನ್ನುವ ಮಹದುದ್ದೇಶದಿಂದ ಅಗತ್ಯ ಸ್ಥಳಗಳಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದವತಿಯಿಂದ ಕುಡಿಯುವ ನೀರಿನ ನಲ್ಲಿ, ಶೌಚಾಲಯಗಳನ್ನು ನಿರ್ಮಿಸಿದ್ದರೂ ನಿರ್ವಹಣೆಯ ಕೊರತೆಯಿಂದ ಕೆಲ ಶೌಚಾಲಯಗಳು ಬಂದ್ ಆಗಿದ್ದರೇ ಇನ್ನೂ ಕೆಲ ಶೌಚಾಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರವಾಸಿಗರು ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.
ರೈತರ ಹಬ್ಬಗಳಲ್ಲಿ ಒಂದಾಗಿರುವ ಮಕರಸಂಕ್ರಮಣದ ದಿನಗಳಂದ ಕೂಡಲಸಂಗಮದ ಶರಣಮೇಳ ಮತ್ತು ವಿಜಯಪುರದ ಸಿದ್ದೇಶ್ವರ ಜಾತ್ರೆಗಳಿಗೆ ಭೆಟಿ ನೀಡಿದ ರೈತರು ಆಲಮಟ್ಟಿಗೆ ಆಗಮಿಸುತ್ತಾರೆ. ಜಲಸಂಪನ್ಮೂಲ ಹೇರಳವಾಗಿರುವ ಆಲಮಟ್ಟಿಯಲ್ಲಿ ಸರ್ಕಾರ ನೀರು ಮತ್ತು ಮಣ್ಣಿನ ಬಳಕೆ, ಸಾವಯವ ಕೃಷಿ, ಹೈನುಗಾರಿಕೆ, ಜೇನುಸಾಕಾಣಿಕೆ ಹೀಗೆ ರೈತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ರೈತ ಸಮ್ಮೆಳನ ನಡೆಸಬೇಕು ಎಂದು ರಾಯಚೂರಿನ ಸೂಗಪ್ಪ ಚಲವಾದಿ ಆಗ್ರಹಿಸಿದರು.ಏಷ್ಯಾ ಖಂಡದಲ್ಲಿಯೇ ಬೃಹತ್ ನೀರಾವರಿ ಯೋಜನೆಗಳಲ್ಲಿಯೇ ದ್ವಿತೀಯ ಸ್ಥಾನದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರಸ್ಥಾನ ಆಲಮಟ್ಟಿಗೆ ಪ್ರತಿ ದಿನ ಉದ್ಯಾನಗಳನ್ನು ವೀಕ್ಷಿಸಲು ಮತ್ತು ಸಾಕ್ಷಾತ್ ಪಾರ್ವತಿ ಅವತಾರವೆಂದೇ ಕರೆಯಲಾಗುತ್ತಿರುವ ಚಂದ್ರಮ್ಮಾದೇವಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು, ಚಂದ್ರಮ್ಮದೇವಿ ದೇವಸ್ಥಾನದ ಬಳಿಯಿರುವ ಸಾಸ್ತ್ರಿ ಸಾಗರ ಜಲಾಶಯದ ಹಿನ್ನೀರು ಪ್ರದೇಶಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇನ್ನು ಯುಗಾದಿ, ದೀಪಾವಳಿಗಳಂತಹ ದಿನಗಳಲ್ಲಿ ರಾಜ್ಯದ ಮತ್ತು ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಲ್ಲಕ್ಕಿ, ಚೌಕಿಗಳನ್ನು ಛತ್ರಿ ಚಾಮರಗಳೊಂದಿಗೆ ಭಕ್ತಾದಿಗಳು ಆಗಮಿಸುತ್ತಾರೆ.
25 ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ:ಸಂಕ್ರಾಂತಿಯ ದಿನದಂದು ಸೋಮವಾರ ರಾಕ್ ಉದ್ಯಾನ, ಕೃಷ್ಣಾ, ಲವಕುಶ ಉದ್ಯಾನಗಳಿಗೆ ಸಂಜೆಯವರೆಗೆ 13,262 ಹಿರಿಯರು, 2160 ಕಿರಿಯರು ಭೇಟಿ ನೀಡಿದ್ದು ಅದರಿಂದ 2,87, 365 ರೂ ಸಂಗ್ರಹವಾಗಿದೆ. ಇನ್ನೂ ಸಂಜೆ ಆರಂಭಗೊಳ್ಳುವ ಸಂಗೀತ ಕಾರಂಜಿ ಒಳಗೊಂಡ 77 ಎಕರೆ ಉದ್ಯಾನಗಳ ಸಮುಚ್ಛಯಗಳಿಗೆ ಭೇಟಿ ನೀಡಿದವರ ಮಾಹಿತಿ ದೊರಕಿಲ್ಲ, ಒಟ್ಟಾರೆ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಸೋಮವಾರ ಆಲಮಟ್ಟಿಗೆ ಭೇಟಿ ನೀಡಿದ್ದಾರೆ ಎಂದು ಆರ್ ಎಫ್ ಓ ಮಹೇಶ ಪಾಟೀಲ ಹೇಳಿದರು.