ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ ವಾರ ಎತ್ತಿನಭುಜ ಪ್ರವಾಸಿ ತಾಣದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಬಂದ ಹಿನ್ನಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ವಿವರಣೆ ಕೋರಿ ಡಿಎಫ್‌ಒ ರಮೇಶ್ ಬಾಬು ಮೂಡಿಗೆರೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ವನ ಪಾಲಕರಿಗೆ ಶುಕ್ರವಾರ ನೊಟೀಸ್ ಜಾರಿ ಮಾಡಿದ್ದಾರೆ.ಮೂಡಿಗೆರೆ ತಾಲೂಕಿನ ಭೈರಾಪುರ ಬಳಿ ಇರುವ ಎತ್ತಿನಭುಜ ಪ್ರವಾಸಿ ಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಇದೊಂದು ಸೂಕ್ಷ್ಮ ಪ್ರದೇಶ, ಇಲ್ಲಿ ಜನರ ಒತ್ತಡ ಹೆಚ್ಚಾಗಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎತ್ತಿನ ಭುಜದಲ್ಲಿ ಚಾರಣ ಚಟುವಟಿಕೆ ಕೈಗೊಳ್ಳುವ ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಸೌಕರ್ಯಗಳನ್ನು ಒದಗಿಸುವ ಪೂರಕ ಕಾಮಗಾರಿಗಳು ಅನುಷ್ಟಾನಗೊಳ್ಳಲಿದ್ದು, ಮುಂದಿನ ಆದೇಶದವರೆಗೆ ಈ ಪ್ರದೇಶದಲ್ಲಿ ಚಾರಣ ಚಟುವಟಿಕೆ ನಿರ್ಬಂಧಿಸಲಾಗಿದೆ ಎಂಬ ಬ್ಯಾನರ್ ಇದೇ ಸ್ಥಳದಲ್ಲಿ ಜೂನ್ 18 ರಂದು ಹಾಕಲಾಗಿದೆ.
ಜೂನ್ 15 ರಿಂದ 3 ದಿನಗಳ ಕಾಲ ರಜೆ ಇದ್ದರಿಂದ ಎತ್ತಿನಭುಜಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು. ಇಲ್ಲಿಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದರೂ ಕೂಡ ಆಸುಪಾಸಿನ ಹೋಂ ಸ್ಟೇಗಳಲ್ಲಿ ವಾಸ್ತವ್ಯ ಹೂಡುತ್ತಿರುವ ಪ್ರವಾಸಿಗರು ಬೇರೆ ಬೇರೆ ಮಾರ್ಗ ಗಳಲ್ಲಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದಾರೆ.ಸಚಿವರ ಸೂಚನೆ:ರಾಜ್ಯದ ಎಲ್ಲಾ ಚಾರಣ ಪಥಗಳಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಪ್ರವೇಶ ನಿರ್ಬಂಧಿಸಿದ್ದರೂ ಕೂಡ ಚಿಕ್ಕಮಗಳೂರು ಜಿಲ್ಲೆ ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿಗೆ ಜೂ. 15, 16 ಮತ್ತು 17 ರಂದು ಸಾವಿರಾರು ಪ್ರವಾಸಿಗರು ಬಂದು ಹೋಗಿದ್ದಾರೆ. ಪ್ರವಾಸಿಗರಿಗೆ ಚಾರಣ ಮಾಡಲು ಅವಕಾಶ ನೀಡಿರುವ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಗುರುವಾರ ಪತ್ರ ಬರೆದಿದ್ದರು.
ಈ ಹಿನ್ನಲೆಯಲ್ಲಿ ಕೂಡಲೇ ಎಚ್ಚರಗೊಂದ ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ವಿವರಣೆ ಕೇಳಿ ಮೂಡಿಗೆರೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ವನ ಪಾಲಕರಿಗೆ ಶುಕ್ರವಾರ ನೊಟೀಸ್ ಜಾರಿ ಮಾಡಿದ್ದಾರೆ.ಇದರ ಜತೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲು ಸ್ಥಳದಲ್ಲಿ ವಿಶೇಷ ತಂಡವನ್ನು ನಿಯೋಜನೆ ಮಾಡಿದ್ದಾರೆ. 21 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ಎತ್ತಿನಭುಜ ಪ್ರದೇಶದಲ್ಲಿ ಪ್ರವಾಸಿಗರಿಗೆ ನಿರ್ಬಂಧಿಸಿರುವ ಸೂಚನಾ ಫಲಕ.