ಮಂಗಳೂರು: ಹೊಸ ವರ್ಷಾಚರಣೆಗೆ ಬೀಚ್‌, ಪಾರ್ಕ್‌ಗಳಿಗೆ ಪ್ರವಾಸಿಗರ ಲಗ್ಗೆ

| Published : Jan 01 2024, 01:15 AM IST

ಮಂಗಳೂರು: ಹೊಸ ವರ್ಷಾಚರಣೆಗೆ ಬೀಚ್‌, ಪಾರ್ಕ್‌ಗಳಿಗೆ ಪ್ರವಾಸಿಗರ ಲಗ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಪಾರ ಜನಸಾಗರವೇ ಹರಿದುಬಂದಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರಿನ ಬೀಚ್‌ಗಳಲ್ಲಿ ಭಾರೀ ಜನಸಾಗರ ಕಂಡುಬಂದಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಆಗಮಿಸಿದೆ.

ಮಂಗಳೂರಿನ ಪಣಂಬೂರು, ಉಳ್ಳಾಲದ ಸೋಮೇಶ್ವರ ಹಾಗೂ ತಣ್ಣೀರುಬಾವಿ ಬೀಚ್‌ಗಳಲ್ಲಿ ಇಡೀ ದಿನ ವಿಪರೀತ ಜನಸಂದಣಿ ಕಂಡುಬಂದಿದೆ. ಪಣಂಬೂರು ಕಡಲಲ್ಲಿ ಜಲಸಾಹಸ ಕ್ರೀಡೆಗಳಲ್ಲಿ ಪ್ರವಾಸಿಗರು ದಿನಪೂರ್ತಿ ತಲ್ಲೀನರಾಗಿದ್ದಾರೆ. ಬೀಚ್‌ಗಳಲ್ಲಿ ಲೈಫ್‌ಗಾರ್ಡ್‌, ನೀರಿಗೆ ಇಳಿಯದಂತೆ ನಿಗಾ ವಹಿಸಲಾಗಿತ್ತು. ಚರ್ಚ್‌ಗಳಲ್ಲಿ ರಾತ್ರಿ 10 ಗಂಟೆ ವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಲಾಗಿದೆ.

ಪಿಲಿಕುಳ ನಿಸರ್ಗಧಾಮ, ಕದ್ರಿ ಪಾರ್ಕ್‌, ಠಾಗೋರ್‌ ಪಾರ್ಕ್‌ ಮಾತ್ರವಲ್ಲ ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳವೇ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲಿ ಕೂಡ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ವಾರಾಂತ್ಯದ ಜತೆ ವರ್ಷಾಂತ್ಯ ಕಳೆಯಲು, ಹೊಸ ವರ್ಷ ಸ್ವಾಗತಿಸಲು ಪ್ರವಾಸಿಗರು ಸೇರಿದ್ದಾರೆ. ಧಾರ್ಮಿಕ ತಾಣಗಳು ಕೂಡ ಹೊಸ ವರ್ಷಾಚರಣೆಗೆ ವಿದ್ಯುತ್‌ ಹಾಗೂ ಹೂವಿನ ಅಲಂಕಾರದಿಂದ ಸಜ್ಜಾಗಿವೆ.

ಮಂಗಳೂರು ನಗರದ ಹೋಟೆಲ್‌ಗಳನ್ನು ಆಕರ್ಷಕವಾಗಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಹೋಟೆಲ್‌ಗಳಲ್ಲಿ ಔತಣಕೂಟ, ಆಟೋಟ, ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಬಹುತೇಕ ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಭರ್ತಿಯಾಗಿದ್ದವು. ನಗರದ ವಿವಿಧ ಚರ್ಚ್‌ಗಳಲ್ಲಿ ಸಂಜೆ ವಿಶೇಷ ಪ್ರಾರ್ಥನೆ ನೆರವೇರಿತು. ಮಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಿಗು ಬಂದೋಬಸ್ತ್‌ ಏರ್ಪಡಿಸಿದ್ದರು. ಸಂಚಾರ ಪೊಲೀಸರು ಮತ್ತು ವಿಶೇಷ ಪೊಲೀಸರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ನಗರದ ಎಲ್ಲೆಡೆ ಪ್ಯಾಟ್ರೋಲಿಂಗ್‌ ನಡೆಸಿದೆ. ಮಂಗಳೂರು ಪೊಲೀಸ್‌ ತಂಡಗಳು ಬೆಳಗ್ಗಿನಿಂದಲೇ ವಿವಿಧೆಡೆ ದಿಢೀರ್‌ ಭೇಟಿ ನೀಡಿ ಡ್ರಿಂಕ್‌ ಅಂಡ್‌ ಡ್ರೈವ್‌, ದಾಖಲೆ ಪರಿಶೀಲನೆ ನಡೆಸಿದವು.

ಡ್ರಗ್ಸ್‌ ಮುಕ್ತ ಹೊಸ ವರ್ಷಾಚರಣೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಅಲ್ಲಲ್ಲಿ ತಪಾಸಣೆ ನಡೆಸುತ್ತಿದ್ದರು. ಹೊಸ ವರ್ಷಾಚರಣೆ ರಾತ್ರಿ 12.30 ರೊಳಗೆ ಮುಕ್ತಾಯಗೊಳಿಸುವಂತೆ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಸೂಚಿಸಿದ್ದಾರೆ.