ಶೃಂಗೇರಿಗೆ ಹರಿದು ಬಂದ ಜನಸಾಗರ

| Published : Jun 03 2024, 12:31 AM IST

ಸಾರಾಂಶ

ಶೃಂಗೇರಿ: ಶ್ರೀ ಶಾರದಾ ಪೀಠಕ್ಕೆ ಕಳೆದ ಕೆಲದಿನಗಳಿಂದ ಜನಸಾಗರವೇ ಹರಿದು ಬರುತ್ತಿದೆ. ವಾರದ ಕೊನೆ ದಿನವಾದ ಭಾನುವಾರ ಶೃಂಗೇರಿಯಲ್ಲಿ ಜನಜಂಗುಳಿ ಕಂಡುಬಂದಿತು.

ಶೃಂಗೇರಿ: ಶ್ರೀ ಶಾರದಾ ಪೀಠಕ್ಕೆ ಕಳೆದ ಕೆಲದಿನಗಳಿಂದ ಜನಸಾಗರವೇ ಹರಿದು ಬರುತ್ತಿದೆ. ವಾರದ ಕೊನೆ ದಿನವಾದ ಭಾನುವಾರ ಶೃಂಗೇರಿಯಲ್ಲಿ ಜನಜಂಗುಳಿ ಕಂಡುಬಂದಿತು.

ಶ್ರೀ ಶಾರದಾ ಪೀಠದ ಆವರಣದಲ್ಲಿ ಭಕ್ತಗಣ ಗಿಜಿಗುಡುತ್ತಿತ್ತು. ಶ್ರೀಮಠದ ಎದುರು ಮುಖ್ಯ ರಸ್ತೆಯಲ್ಲಿ ಜನರ ಸಾಲು ಸಾಲು ಗುಂಪುಗಳು ಕಂಡುಬಂದಿತು. ರಸ್ತೆಯಲ್ಲಿ ಆಗಾಗ ಟ್ರಾಫಿಕ್‌ ಸಮಸ್ಯೆ ಮಾಮೂಲಾಗಿದೆ. ಜನನಿಬಿಡ ಗಾಂಧಿ ಮೈದಾನದಲ್ಲಿ ವಾಹನ, ಜನದಟ್ಟಣೆ ಹೆಚ್ಚಾಗಿತ್ತು.

ಶ್ರೀ ಶಾರದಾಂಬಾ ದೇವಾಲಯ, ಶ್ರೀಮಠದ ನರಸಿಂಹವನ, ಬೋಜನಾ ಶಾಲೆ, ಶ್ರೀಮಠದ ಆವರಣದ ಪ್ರಮುಖ ದೇವಾಲಯಗಳಲ್ಲಿ ಭಕ್ತರ ನೂಕುನುಗ್ಗಲು ಇತ್ತು. ಪಟ್ಟಣದಲ್ಲಿನ ಎಲ್ಲಾ ವಸತಿ ಗೃಹಗಳು ಭರ್ತಿ ಯಾಗುತ್ತಿವೆ.ಇನ್ನುಳಿದಂತೆ ಅಂಗಡಿ, ಹೋಟೇಲುಗಳು, ಬಸ್‌ ನಿಲ್ದಾಣದಲ್ಲಿ ಜನರ ದಂಡೇ ಕಂಡುಬರುತ್ತಿದೆ.

ಶಕ್ತಿ ಯೋಜನೆಯಡಿ ಉಚಿತವಾಗಿ ಸರ್ಕಾರಿ ಕೆಂಪು ಬಸ್‌ಗಳಲ್ಲಿ ನಾರಿಮಣಿಯರ ದಂಡೇ ಶೃಂಗೇರಿಯತ್ತ ಬರುತ್ತಿದ್ದು ಎಲ್ಲಾ ಬಸ್‌ಗಳು ಭರ್ತಿಯಾಗಿ ಸಂಚರಿಸುತ್ತಿವೆ. ಬಸ್‌ ನಿಲ್ದಾಣ, ಪಟ್ಟಣದಲ್ಲಿ ವಿವಿಧೆಡೆಗಳಿಂದ ಮಹಿಳೆಯರು, ಮಕ್ರಳು ಬೆಳಿಗ್ಗೆಯಿಂದ ಸಂಜೆಯವರೆಗೂ ಸಾಲು ಸಾಲಾಗಿ ಬಂದು ಹೋಗುತ್ತಿರುವುದು ನಿತ್ಯದ ದೃಶ್ಯವಾಗಿದೆ.

ಮಳೆಯನ್ನು ಲೆಕ್ಕಿಸದೇ ಜನರು ಶೃಂಗೇರಿಯತ್ತ ಬರುತ್ತಿದ್ದಾರೆ. ಶನಿವಾರ, ಭಾನುವಾರ ಶೃಂಗೇರಿಯಲ್ಲಿ ಜನ ಜಂಗುಳಿ ಸಾಮಾನ್ಯವಾಗಿದೆ. ಭಾನುವಾರ ಸಂಜೆಯವರೆಗೂ ಜನಸಾಗರವಿತ್ತು.

2 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದಲ್ಲಿ ಭಾನುವಾರ ಕಂಡು ಬಂದ ಜನಜಂಗುಳಿ