ಹೊಸ ವರ್ಷದ ಮೊದಲ ದಿನ ಗೋಕರ್ಣದಲ್ಲಿ ಜನಸಾಗರ

| Published : Jan 02 2025, 12:34 AM IST

ಹೊಸ ವರ್ಷದ ಮೊದಲ ದಿನ ಗೋಕರ್ಣದಲ್ಲಿ ಜನಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ರೆಸಾರ್ಟ್ ಹೋಟೇಲ್‌ಗಳಲ್ಲಿ ಡಿಜೆ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರೇ ಹಾಡಿಗೆ ಹೆಜ್ಜೆ ಹಾಕಿ ನೂತನ ವರ್ಷವನ್ನು ಸ್ವಾಗತಿಸಿದರು.

ಗೋಕರ್ಣ: ಎಲ್ಲೆಡೆ ಬೆಳಕಿನ ಚಿತ್ತಾರ ಸಿಡಿಮದ್ದಿನ ಅಬ್ಬರ, ಕಡಲ ತಟದಲ್ಲಿ ಕುಳಿತು ಕುಡಿದು ಕುಣಿದು ಕುಪ್ಪಳಿಸುವ ಯುವಕ ಯುವತಿಯರ ದಂಡು, ಡಿಜೆ ಹಾಡಿನ ಅಬ್ಬರ...- ಇದು ಪ್ರವಾಸಿ ತಾಣದಲ್ಲಿ ನೂತನ ವರ್ಷವನ್ನು ಸ್ವಾಗತಿಸಿದ ಬಗೆ. ಇಲ್ಲಿನ ಓಂ, ಕುಡ್ಲೆ, ಮುಖ್ಯ ಕಡಲತೀರ, ರುದ್ರಪಾದ, ಗಂಗೆಕೊಳ್ಳ, ಗಂಗಾವಳಿ ಕಡಲ ತೀರದಲ್ಲಿನ ಹೋಟೆಲ್, ರೆಸಾರ್ಟ್‌ಗಳಲ್ಲಿ ತಂಗಿದ್ದ ಪ್ರವಾಸಿಗರು ತಮ್ಮ ಗೆಳೆಯ, ಗೆಳೆತಿಯರೊಡನೆ ಕಡಲ ತೀರದಲ್ಲಿ ಮದ್ಯ ಸೇವನೆ, ವಿಶೇಷ ಬೆಳಕಿನ ಬಲೂನ್ ಬಿಡುವುದು ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ರಾತ್ರಿ ೧೨ ಗಂಟೆಯಾಗುತ್ತಲೇ ಪರಸ್ಪರ ಹೊಸ ವರ್ಷದ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಾ ಸಂಭ್ರಮಿಸಿದರು.

ಹಲವು ರೆಸಾರ್ಟ್ ಹೋಟೇಲ್‌ಗಳಲ್ಲಿ ಡಿಜೆ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರೇ ಹಾಡಿಗೆ ಹೆಜ್ಜೆ ಹಾಕಿ ನೂತನ ವರ್ಷವನ್ನು ಸ್ವಾಗತಿಸಿದರು.ಇನ್ನು ಪೇಟೆಯಲ್ಲಿನ ವಿವಿಧ ವಸತಿಗೃಹಗಳಲ್ಲಿ ತಂಗಿದ್ದ ಪ್ರವಾಸಿಗರು ಊರಿನ ಹೊರಗಡೆ ಬಂದು ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಎಂ. ನಾರಾಯಣ್ ಹಾಗೂ ಕಾರವಾರ ವಿಶೇಷ ಪೊಲೀಸ್ ದಳದ ಡಿವೈಎಸ್ಪಿ ಅಶ್ವಿನಿ, ಭಟ್ಕಳ ಡಿವೈಎಸ್ಪಿ ಎಂ.ಕೆ. ಮಹೇಶ್, ರಾತ್ರಿ ಕುಡ್ಲೆ ಕಡಲ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಲ್ಲಿಯೇ ವಾಸ್ತವ್ಯ ಮಾಡಿದ್ದರು. ಇವರ ಮಾರ್ಗದರ್ಶನದಲ್ಲಿ ಪಿಐ ವಸಂತ ಆಚಾರ್ ಹಾಗೂ ಪಿಎಸ್‌ಐಗಳಾದ ಖಾದರ್ ಬಾಷಾ ಶಶಿಧರ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು.ಹೊಸ ವರ್ಷದ ದಿನ ದೇವಾಲಯಗಳಲ್ಲೂ ಜನಸಂದಣಿ

ಕಾರವಾರ: ಕಡಲತೀರ, ಪ್ರವಾಸಿ ತಾಣಗಳಲ್ಲಿ ಹೊಸ ವರ್ಷದ ಸಂಭ್ರಮದ ಜತೆ ದೇವಾಲಯಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು, ಪೂಜೆ ನೆರವೇರಿಸಿದರು.

ಗೋಕರ್ಣ ಮಹಾಬಲೇಶ್ವರ ದೇವಾಲಯ, ಮಹಾಗಣಪತಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಹಾಗೆ ಮುರ್ಡೇಶ್ವರ, ಇಡಗುಂಜಿ ವಿನಾಯಕ ದೇವಾಲಯಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.ಪ್ರವಾಸಿಗರು ಹೊಸ ವರ್ಷಾಚರಣೆಗೆ ಗೋಕರ್ಣ, ಮುರ್ಡೇಶ್ವರಗಳ ಕಡಲತೀರದಲ್ಲಿ ಬೀಡುಬಿಟ್ಟಿದ್ದರು. ಮಂಗಳವಾರ ರಾತ್ರಿ ಕಡಲತೀರದಲ್ಲಿ ಸಂಭ್ರಮಿಸಿದರೆ, ಅವರಲ್ಲಿ ಬಹುತೇಕ ಪ್ರವಾಸಿಗರು ದೇವಾಲಯಗಳಿಗೆ ಆಗಮಿಸಿ ದೇವರ ದರ್ಶನ ಪಡೆದರು.ಗೋಕರ್ಣ, ಮುರ್ಡೇಶ್ವರ ದೇವಾಲಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ಜನತೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಶಿರಸಿಯ ಮಾರಿಕಾಂಬಾ, ಯಾಣದ ಭೈರವೇಶ್ವರ ಮತ್ತಿತರ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಸ್ಪಲ್ಪ ಹೆಚ್ಚಿತ್ತು.