ಹೊಸ ವರ್ಷಕ್ಕೆ ಮಹಾಲಕ್ಷ್ಮೀ ದರ್ಶನಕ್ಕೆ ಬಂದ ಜನಸಾಗರ

| Published : Jan 03 2025, 12:32 AM IST

ಸಾರಾಂಶ

ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ಹೊಸ ವರ್ಷದ ಪ್ರಯುಕ್ತ ೩೫ ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಬರುವ ಭಕ್ತರಿಗೆ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ಹೊಸ ವರ್ಷದ ಪ್ರಯುಕ್ತ ೩೫ ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಬರುವ ಭಕ್ತರಿಗೆ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ೨೦೨೫ ವರ್ಷದ ಆರಂಭದ ಎರಡು ದಿನಗಳು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಮುಂಜಾನೆಯಿಂದಲೇ ಶ್ರೀಮಹಾಲಕ್ಷ್ಮೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿಶೇಷ ಪೂಜೆಗಳು ನಡೆದಿದ್ದು, ೩೫ ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದಿದ್ದು, ಭಕ್ತರಿಗೆ ನೂತನ ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಾಸುದೇವ ಮಾತನಾಡಿ, ಹೊಸ ವರ್ಷದ ಪ್ರಯುಕ್ತ ಮಹಾಲಕ್ಷ್ಮೀ ಅಮ್ಮನವರಿಗೆ ಮುಂಜಾನೆಯಿಂದಲೇ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದ್ದು, ದೇವಾಲಯಕ್ಕೆ ೩೫ ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದು, ದರ್ಶನ ಪಡೆದ ಭಕ್ತರಿಗೆ ದಾಸೋಹ ನಿಲಯದಲ್ಲಿ ಅಮ್ಮನವರ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಪೋಲಿಸ್ ಬಿಗಿ ಬಂದೋಬಸ್ತ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಎಂದರು. ಟ್ರಸ್ಟ್‌ನ ವಿಶೇಷ ಅಧಿಕಾರಿ ಕೇಶವಮೂರ್ತಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಸಹ ಹೊಸ ವರ್ಷದ ಅಂಗವಾಗಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಟ್ರಸ್ಟ್ ವತಿಯಿಂದ ಮುಂಜಾನೆಯಿಂದಲೂ ಧಾರ್ಮಿಕ ಪೂಜೆಗಳು ನಡೆದಿದ್ದು, ಭಕ್ತರ ದರ್ಶನದಲ್ಲಿ ಅಡಚಣೆ ಉಂಟಾಗಬಾರದೆಂದು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರು.ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯಶರ್ಮ ಮಾತನಾಡಿ, ಶ್ರೀಮಹಾಲಕ್ಷ್ಮೀ ಟ್ರಸ್ಟ್ ವತಿಯಿಂದ ಮುಂಜಾನೆಯಿಂದಲೇ ಅಭಿಷೇಕ, ಅಲಂಕಾರ, ವಿಶೇಷ ಪೂಜೆಗಳು ನಡೆದಿದ್ದು, ಭಕ್ತರು ಸಾವಿರಾರು ಸಂಖೈಯಲ್ಲಿ ಆಗಮಿಸಿ ದರ್ಶನ ಪಡೆದಿದ್ದಾರೆ. ಅಮ್ಮನವರ ಅನುಗ್ರಹದಿಂದ ಈ ಹೊಸ ವರ್ಷವು ಪ್ರತಿಯೊಬ್ಬರ ಬಾಳಿಗೆ ಬೆಳಕಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮುರುಳಿಕೃಷ್ಣ, ಖಚಾಂಚಿ ಜಗದೀಶ್, ಧರ್ಮದರ್ಶಿಗಳಾದ ಡಾ.ಲಕ್ಷ್ಮೀಕಾಂತ, ನಟರಾಜು, ಶ್ರೀಪ್ರಸಾದ್, ರವಿರಾಜೇಅರಸ್, ಓಂಕಾರೇಶ್, ಚಿಕ್ಕನರಸಯ್ಯ, ಮಂಜುನಾಥ್, ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ, ನಾಗರಾಜು ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.