ಕ್ರಷರ್‌ ರಸ್ತೆಯೇ ದುರುಪಯೋಗ ಸಾಬೀತು: ಛಲವಾದಿ ನಾರಾಯಣಸ್ವಾಮಿ

| Published : Sep 25 2024, 01:03 AM IST

ಕ್ರಷರ್‌ ರಸ್ತೆಯೇ ದುರುಪಯೋಗ ಸಾಬೀತು: ಛಲವಾದಿ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರ ಒಡೆತನದ ಕ್ರಷರ್‌ಗೆ ರಸ್ತೆ ಮಾಡಿರೋದರಲ್ಲಿ ಅಧಿಕಾರಿಗಳ ದುರುಪಯೋಗ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಗುಂಡ್ಲುಪೇಟೆಯಲ್ಲಿ ದಲಿತರು ದೂರು ನೀಡಿದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಶಾಸಕರ ಒಡೆತನದ ಕ್ರಷರ್‌ಗೆ ರಸ್ತೆ ಮಾಡಿರೋದರಲ್ಲಿ ಅಧಿಕಾರಿಗಳ ದುರುಪಯೋಗ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡಹುಂಡಿ ಬಳಿಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರಿಗೆ ಸೇರಿದ ಕ್ರಷರ್‌ಗೆ ದಲಿತ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಿ ತೊಂದರೆಯಾಗಿದೆ ಎಂದು ದಲಿತರು ದೂರು ನೀಡಿದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದರು. ಇಲ್ಲಿನ ತಹಸೀಲ್ದಾರ್‌ ಹಾಗೂ ಬೇಗೂರು ಪೊಲೀಸರು ಇಲ್ಲಿನ ಶಾಸಕರ ತೃಪ್ತಿ ಪಡಿಸಲು ಹೋಗಿ ಜನರಿಗಾಗಿ ರಸ್ತೆ ಮಾಡಲಿಲ್ಲ. ಕ್ರಷರ್‌ಗೆ ರಸ್ತೆ ಮಾಡುತ್ತಿದ್ದಾರೆ ಇದು ತಪ್ಪು ಎನ್ನುವುದು ಸಾಬೀತು ಕೂಡ ಆಗಿದೆ ಎಂದರು.

ರಸ್ತೆ ಮಾಡಲು ಗುತ್ತಿಗೆದಾರ ಯಾರು ಎಂಬುದು ಗೊತ್ತಿಲ್ಲ. ಯಾವ ಅನುದಾನ ಅನ್ನೋದು ಗೊತ್ತಿಲ್ಲ. 8 ವರ್ಷದ ಹಿಂದಿನ ಹಣ ಅಂತಾರೆ ಎಂಟು ವರ್ಷದಿಂದ ಅನುದಾನ ವಾಪಸ್‌ ಹೋಗಿಲ್ವ? ತಹಸೀಲ್ದಾರ್‌ ತಪ್ಪು ಮಾಹಿತಿ ನೀಡಿ, ಅವರೇ ಖಾತ್ರಿ ಮಾಡಿದ್ದಾರೆ ಎಂದರು. ಯಾರದೋ ಹಿತಕ್ಕಾಗಿ ಕಾಯಲು ಹೋಗಬೇಡಿ ಎಂದು ತಹಸೀಲ್ದಾರ್‌ ಹಾಗೂ ಬೇಗೂರು ಪೊಲೀಸರಿಗೆ ತಿಳಿ ಹೇಳಿದರಲ್ಲದೆ ಯಾರ ಮರ್ಜಿಗೂ ಒಳಗಾಗದೆ ಜನರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಕೆಲಸ ನಿಲ್ಲಿಸಿ:

ಕ್ರಷರ್‌ಗಾಗಿ ಮಾಡಿರುವ ಕೆಲಸ ಇಂದಿನಿಂದಲೇ ನಿಲ್ಲಿಸಬೇಕು. ಹಿಂದೆ ಹೇಗಿತ್ತೋ ಅದೇ ರೀತಿ ಜಮೀನು ಕೂಡ ಇರಬೇಕು. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ರೈತರ ಸಭೆ ಕರೆಯುವ ತನಕ ಯಥಾಸ್ಥಿತಿ ಮುಂದುವರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಒಪ್ಪಿಗೆ ಪಡೆದಿಲ್ಲ:

ದಲಿತರ ವಿರೋಧದ ನಡುವೆ ಬಂಡಿ ದಾರಿ ಮಾಡಿಸಲು ತಹಸೀಲ್ದಾರ್‌, ಪೊಲೀಸರು ಗುತ್ತಿಗೆದಾರರಲ್ಲ. ದಲಿತರ ಹೆದರಿಸಿ, ಬೆದರಿಸಿ ಆಮೀಷ ಒಡ್ಡಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಈ ಸಮಯದಲ್ಲಿ ಮಾಜಿ ಸಚಿವ ಎನ್.ಮಹೇಶ್‌, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌, ಬಿಜೆಪಿ ಹಿರಿಯ ಮುಖಂಡ ಸಿ.ಮಹದೇವಯ್ಯ, ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್‌, ಬಿಜೆಪಿ ದಲಿತ ಮೋರ್ಚ ಮುಖಂಡ ಪ್ರಕಾಶ್‌ ಮೂಡ್ನಾ ಕೂಡು, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್‌, ಉಪ ವಿಭಾಗಾಧಿಕಾರಿ ಬಿ.ಆರ್.‌ಮಹೇಶ್‌, ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಸೇರಿದಂತೆ ಹಲವರಿದ್ದರು.

ಕ್ರಷರ್‌ಗೆ ತೆರಳುವ ರಸ್ತೆ ಅಗೆದ ಗ್ರಾಮಸ್ಥರು ಗುಂಡ್ಲುಪೇಟೆ ತಹಸೀಲ್ದಾರ್‌, ಪೊಲೀಸರು ಶಾಸಕರ ಕ್ರಷರ್‌ಗೆ ತೆರಳುವ ರಸ್ತೆ ಮಾಡಿಸಿದ್ದ ರಸ್ತೆಯನ್ನು ತಾಲೂಕಿನ ಹಿರೀಕಾಟಿ ಗ್ರಾಮದ ದಲಿತ ರೈತರು ಅಗೆದು ಹಾಕಿದ ಪ್ರಸಂಗ ನಡೆದಿದೆ. ತಾಲೂಕಿನ ಹಿರೀಕಾಟಿ ಗ್ರಾಮದ ದಲಿತರ ಭೂಮಿಯಲ್ಲಿ ಬಂಡಿ ದಾರಿ ನೆಪದಲ್ಲಿ ರಸ್ತೆ ಮಾಡಿಸಿ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಯ ಬಳಿಕ ರಸ್ತೆಯನ್ನು ರೈತರು ಅಗೆದು ಹಾಕಿದರು.

ತಹಸೀಲ್ದಾರ್‌, ಪೊಲೀಸರಿಗೆ

ವಿಪ ವಿಪಕ್ಷ ನಾಯಕನಿಂದ ಕ್ಲಾಸ್

ಗುಂಡ್ಲುಪೇಟೆ ತಹಸೀಲ್ದಾರ್‌, ಬೇಗೂರು ಪೊಲೀಸರಿಗೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೆವರು ಇಳಿಸಿದರು. ದಲಿತರ ಭೂಮಿಯಲ್ಲಿ ರಸ್ತೆ ನಿರ್ಮಿಸುವ ಸಂಬಂಧ ಗ್ರಾಮದ ದಲಿತರು ಹಾಗೂ ಅಧಿಕಾರಿಗಳ ಜೊತೆಗೆ ಮಾತನಾಡುವ ಸಮಯದಲ್ಲಿ ಅಧಿಕಾರಿಗಳು ಯಾರ ಪರವಾಗಿಯೂ ಕೆಲಸ ಮಾಡಬೇಡಿ, ಕಾನೂನಿನ ಪ್ರಕಾರ ಕೆಲಸ ಮಾಡಿ. ಅದು ಬಿಟ್ಟು ಮುಲಾಜಿಗೆ ಒಳಗಾಗಿ ಕೆಲಸ ಮಾಡಿದರೆ ಇಂದಿನ ಘಟನೆಯೇ ಸಾಕ್ಷಿ ಎಂದರು.