ಸಾರಾಂಶ
ಕುಂದಾಣ: ಪಂಚಾಯತಿ ಹಾಗೂ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯಲ್ಲಿ ಪಂಚಾಯತಿ ಕಟ್ಟಡ, ಶಾಲಾ ಕಟ್ಟಡ ಸೇರಿದಂತೆ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಬಿದಲೂರು ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಪಿ.ಮುನಿರಾಜು ತಿಳಿಸಿದರು.
ಬಿದಲೂರು ಪಂಚಾಯತಿ ವ್ಯಾಪ್ತಿಯ ಕತ್ತಿಮಾರಮ್ಮ ದೇವಾಲಯದ ಅವರಣದಲ್ಲಿ ಹಮ್ಮಿಕೊಂಡಿದ್ದ ಮೊದಲನೇ ಹಂತದ ವಾರ್ಡ್ ಸಭೆ, ಗ್ರಾಮ ಸಭೆ, ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು. ಪ್ರತಿ ಹಳ್ಳಿಗಳಲ್ಲೂ ಹೈಮಾಸ್ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಪ್ರತಿ ಗ್ರ್ರಾಮಕ್ಕೂ ೩ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಬಿದಲೂರು ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದವರಿಗಾಗಿ ಶೇ.೨೫ ಹಣ ಮೀಸಲಿಡಲಾಗಿದೆ. ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಕುಟುಂಬಕ್ಕೆ ೫ ಸಾವಿರ ಹಣ ಹಾಗೂ ಶಿಥಿಲ ಶವಪಟ್ಟಿಗೆಯ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.ಪ್ರಿಸ್ಟೀಜ್ ಕಂಪನಿಯ ಸಿಎಸ್‌ಆರ್ ನಿಧಿಯಿಂದ 2.20 ಕೋಟಿ ವೆಚ್ಚದಲ್ಲಿ ಪಂಚಾಯತಿಯ ನೂತನ ಕಟ್ಟಡ ಹಾಗೂ ೧.೮೫ ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲೆ ಉದ್ಘಾಟಿಸಲಾಗುವುದು. ಸಾವಕನಹಳ್ಳಿಯಲ್ಲಿ ಎಸ್‌ಟಿಆರ್ ರಸ್ತೆ ಹಾದು ಹೋಗಿದ್ದು, ರಸ್ತೆ ಹತ್ತಿ-ಇಳಿಯಲು ವ್ಯವಸ್ಥೆ ಕಲ್ಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಎಲ್ಲಾ ಸದಸ್ಯರು ಒಗ್ಗೂಡಿ ಪಕ್ಷಾತೀತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಸರ್ವೆ ನಂಬರ್‌ಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಪಂಚತಂತ್ರದಲ್ಲಿ ಸೇರಿಸಲು ಅವಕಾಶವಿದ್ದು ಪಹಣಿ ಮಾಲೀಕರ ಹೆಸರಿನಲ್ಲಿದ್ದರೆ ಅಂತಹವರಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಬಿದಲೂರು ಗ್ರಾಪಂ ಪಿಡಿಒ ಸಿದ್ದರಾಜು ಮಾತನಾಡಿ, ಬಯಲು ಮುಕ್ತ ಶೌಚಾಲಯ ಯೋಜನೆಗೆ ಸಹಕರಿಸಿ, ಗ್ರಾಮದ ಪ್ರತಿಯೊಬ್ಬರು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡರೆ ಅವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಕಡಿವಾಣಕ್ಕೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಾವಕನಹಳ್ಳಿಯಲ್ಲಿ ಕೂಸಿನ ಮನೆ ತೆರೆದು ಮಕ್ಕಳನ್ನು ಪೋಷಣೆ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ. ಪಂಚಾಯತಿಯಲ್ಲಿ ಶಿಥಿಲ ಶವಪೆಟ್ಟಿಗೆ ಖರೀದಿಸಿದ್ದು ಅಗತ್ಯವಿದ್ದವರು ಅದರ ಸದುಪಯೋಗ ಪಡೆದುಕೊಳ್ಳಬಹುದು. ಮರಣ ಪ್ರಮಾಣಪತ್ರ ಪಂಚಾಯತಿಯಲ್ಲೇ ಉಚಿತವಾಗಿ ವಿತರಿಸಲಾಗುತಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ೩ ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಎಲ್ಲಾ ಸದಸ್ಯರು ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ಕಟ್ಟಡ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.ಇದೆ ವೇಳೆ ಗ್ರಾಪಂ ಅಧ್ಯಕ್ಷ ಎ.ನಾಗರಾಜು, ಉಪಾಧ್ಯಕ್ಷೆ ಜ್ಞಾನೇಶ್ವರಿ, ಸದಸ್ಯರಾದ ಹರ್ಷಿತ, ಅನುರಾಧ, ಎಂ.ನಾಗರಾಜು, ಪ್ರಕಾಶ್, ನಂದಕುಮಾರ್, ಎನ್.ರಾಜಶೇಖರ್, ಎಂ.ಎನ್.ಪ್ರದೀಪ್, ವಿನೀತ್‌ಕುಮಾರ್, ವರಮಹಾಲಕ್ಷ್ಮೀ, ಚಂದ್ರಕಲಾ, ಟಿ.ಎ.ಗೌರಿ, ಸ್ಪೂರ್ತಿ, ಅನಿತಾ, ವಿಮಲ, ಪಂಚಾಯತಿ ಕಾರ್ಯದರ್ಶಿ ಚಂದ್ರಶೇಖರ್ ಬಾಬು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.
೦೧ ಚಿತ್ರಸುದ್ದಿ: ೧೬ ಕುಂದಾಣ ಪೊ-೧ಬಿದಲೂರು ಗ್ರಾಮ ಸಭೆಯಲ್ಲಿ ಶಾಲಾ ಮಕ್ಕಳಿಗೆ ಪರಿಕರ ವಿತರಿಸಲಾಯಿತು.
೦೨ ಚಿತ್ರಸುದ್ದಿ: ೧೬ ಕುಂದಾಣ ಪೊ-೨ಬಿದಲೂರು ಗ್ರಾಮಸಭೆಯಲ್ಲಿ ವಿಶೇಷಚೇತನರಿಗೆ ಸವಲತ್ತು ವಿತರಿಸಲಾಯಿತು.