ಸಿ.ಟಿ. ರವಿ ಮೇಲೆ ಹಲ್ಲೆ: ಬೀದಿಗಿಳಿದ ಬಿಜೆಪಿ

| Published : Dec 21 2024, 01:15 AM IST

ಸಾರಾಂಶ

ಪ್ರಜಾಪ್ರಭುತ್ವದ ದೇಗುಲ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ಕಾಂಗ್ರೆಸ್ಸಿನ ದುಷ್ಕೃತ್ಯ ಖಂಡನೀಯ. ಇದರ ವಿರುದ್ಧ ಬಿಜೆಪಿ ರಾಜ್ಯಾದಾದ್ಯಂತ ಹೋರಾಟ ನಡೆಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ತಿಳಿಸಿದರು.

ಸುವರ್ಣ ಸೌಧಕ್ಕೆ ಗೂಂಡಾಗಳ ಬಿಟ್ಟಿದ್ದು ದುಷ್ಕೃತ್ಯ । ತುರ್ತು ಪರಿಸ್ಥಿತಿ ಏರಿದ ಪಕ್ಷದಿಂದ ಸಂವಿಧಾನದ ಕತ್ತು ಹಿಸುಕುವ ಕೆಲಸ ಎಂದು ಆಕ್ರೋಶ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಜಾಪ್ರಭುತ್ವದ ದೇಗುಲ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ಕಾಂಗ್ರೆಸ್ಸಿನ ದುಷ್ಕೃತ್ಯ ಖಂಡನೀಯ. ಇದರ ವಿರುದ್ಧ ಬಿಜೆಪಿ ರಾಜ್ಯಾದಾದ್ಯಂತ ಹೋರಾಟ ನಡೆಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ ವಿರುದ್ಧ ಮತ್ತು ಸಿಟಿ ರವಿ ಬಂಧನ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಸದನದ ಒಳಗಿನ ಘಟನೆಯನ್ನು ಉಲ್ಲೇಖಿಸಿ ದೂರು ಪಡೆದುಕೊಂಡು ಶಾಸಕ ಹಾಗೂ ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿಯವರನ್ನು ಬಂಧಿಸಿರುವ ಕ್ರಮ ಸರಿಯಿಲ್ಲ. ವಿಧಾನಮಂಡಲದ ಘನತೆಯನ್ನು ಮಣ್ಣು ಪಾಲು ಮಾಡಿದೆ. ತುರ್ತು ಪರಿಸ್ಥಿತಿ ಏರಿ ಸಂವಿಧಾನ ವಿರೋಧಿ ಧೋರಣೆ ಅನುಸರಿಸಿದ ಕಾಂಗ್ರೆಸ್ ತನ್ನ ಹತಾಶ ಮನೋಭಾವನೆಯನ್ನು ಪ್ರದರ್ಶಿಸಿದೆ ಎಂದು ಹರಿಹಾಯ್ದರು.

ಅಂಬೇಡ್ಕರ್ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ಸಿಗೆ ಸಂವಿಧಾನಕ್ಕೆ ಗೌರವ ಕೊಡುವ ಮಾನಸಿಕತೆ ಇಲ್ಲ. ಮೊಸಳೆ ಕಣ್ಣೀರು ಸುರಿಸಿ ಸಂವಿಧಾನದ ಕತ್ತು ಹಿಸುಕುವ ತಮ್ಮ ಹಳೆ ಚಾಳಿಯನ್ನು ಕಾಂಗ್ರೆಸ್ ಮುಂದುವರೆಸಿದೆ. ಸದನಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮೂಡಾ, ವಾಲ್ಮೀಕಿ ಹಗರಣಗಳ ಸರಮಾಲೆಯಲ್ಲಿ ಸಿಲುಕಿದ ಸರ್ಕಾರ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಪ್ರಕರ ಹಿಂದುತ್ವವಾದಿ ಸಿ.ಟಿ. ರವಿ ಮೇಲೆ ಹಲ್ಲೆ ನಡೆಸಲು ಮುಂದಾಗಿದೆ. ರಾಜ್ಯಪಾಲರು ಕೂಡಲೇ ಮಧ್ಯೆ ಪ್ರವೇಶಿಸಿ ಸಚಿವೆ ಹೆಬ್ಬಾಳಕರ್ ಅವರ ಪಿಎಯನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲು ಕಾಂಗ್ರೆಸ್ ಹೊರಟಿದೆ. ಸಿ.ಟಿ.ರವಿಯ ಅವರೊಂದಿಗೆ 40 ವರ್ಷದ ಒಡನಾಟ ನನಗಿದೆ. ನಾನು ಕೂಡ ಸದನದಲ್ಲಿದ್ದೆ. ಸಚಿವರ ಹಿಂಬಾಲಕರು ಸದನದ ಒಳಗೆ ನುಗ್ಗಿ ಮಾಡಿದ ಗೂಂಡಾ ವರ್ತನೆಯನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಎಸ್. ದತ್ತಾತ್ರಿ, ಮೋಹನ್‍ರೆಡ್ಡಿ, ಹರೀಶ್, ಜಗದೀಶ್, ಶಾಂತ ಸುರೇಂದ್ರ, ಸುರೇಖಾ ಮುರಳೀಧರ್,ರತ್ನಾಕರ್ ಶೆಣೈ, ಕೆ.ಜಿ. ಕುಮಾರಸ್ವಾಮಿ, ರಶ್ಮಿ ಶ್ರೀನಿವಾಸ್, ಚೈತ್ರ ನಾಯಕ್, ರಮೇಶ್, ಜ್ಞಾನೇಶ್ವರ್, ಚಂದ್ರಶೇಖರ್ ಮೊದಲಾದವರು ಇದ್ದರು.

ಚಿಂತಕರ ಚಾವಡಿ ಎನ್ನುವ ವಿಧಾನಪರಿಷತ್ತನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ. ಅಂಬೇಡ್ಕರ್ ಮತ್ತು ಗಾಂಧಿಜಿಯ ಹೆಸರನ್ನು ಮತಕ್ಕಾಗಿ ದುರ್ಬಳಕೆ ಮಾಡಿಕೊಂಡು ಬಂದ ಕಾಂಗ್ರೆಸ್. ನಾಚಿಕೆ ಮಾನ ಮಾರ್ಯಾದೆ ಬಿಟ್ಟು ಒಬ್ಬ ಜನಪ್ರತಿನಿಧಿಯ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸುವ ಷಂಡತನ ಪ್ರದರ್ಶಿಸಿದೆ. ಡಾ. ಧನಂಜಯ ಸರ್ಜಿ ವಿಪ ಸದಸ್ಯ