ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಡುವಿನ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ. ಈ ನಡುವೆಯೇ ಸಿ.ಟಿ. ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ದಾಖಲಿಸಿದ್ದ ಪ್ರಕರಣ ಹಾಗೂ ಹೆಬ್ಬಾಳಕರ ಬೆಂಬಲಿಗರ ಮೇಲೆ ದಾಖಲಾಗಿದ್ದ ಎರಡೂ ಪ್ರಕರಣಗಳನ್ನು ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸಿಒಡಿಗೆ ಹಸ್ತಾಂತರ ಮಾಡಿದ್ದಾರೆ.ಸುವರ್ಣ ವಿಧಾನಸೌಧದ ವಿಧಾನ ಪರಿಷತ್ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರು ಆಕ್ಷೇಪನಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಲಕ್ಷ್ಮೀ ಹೆಬ್ಬಾಳಕರ ಅವರು ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿ.ಟಿ. ರವಿ ಅವರ ಮೇಲೆ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರು ಹಲ್ಲೆಗೆ ಯತ್ನಿಸಿದರು. ಅಲ್ಲದೆ, ಪೊಲೀಸರು ಕೂಡ ಸುವರ್ಣ ವಿಧಾನಸೌಧದ ಆವರಣದಲ್ಲಿಯೇ ರವಿ ಅವರನ್ನು ಹೊತ್ತುಕೊಂಡು ಹೋಗಿ ಬಂಧಿಸಿದ್ದರು. ರಾತ್ರಿಯಿಡೀ ಸಿ.ಟಿ.ರವಿ ಅವರನ್ನು ಪೊಲೀಸರು ಠಾಣೆಯಿಂದ ಠಾಣೆಗೆ ಅಲೆದಾಡಿಸಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರ ವಿರುದ್ಧವೂ ಬಿಜೆಪಿ ನಾಯಕರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎರಡು ಪ್ರತ್ಯೇಕವಾಗಿ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರದ ನಿರ್ದೇಶನದ ಮೇರೆಗೆ ಪೊಲೀಸ್ ಆಯುಕ್ತರು ಸಿಐಡಿಗೆ ಹಸ್ತಾಂತರ ಮಾಡಿದ್ದಾರೆ.ಸಿ.ಟಿ. ರವಿಯನ್ನು ರಾತ್ರಿಯಿಡೀ ಸುತ್ತಾಡಿಸಲು ಮಾಧ್ಯಮದವರೇ ಕಾರಣ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಸಿಟಿ ರವಿ ರವರನ್ನು ವಶಕ್ಕೆ ಪಡೆದು, ಹಿರೇಬಾಗೇವಾಡಿ ಠಾಣೆಯ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಸಿ.ಟಿ. ರವಿ ಅವರ ಭದ್ರತಾ ಅಂಶವನ್ನು ಪರಿಗಣಿಸಿ ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಬಳಿ ಅಪಾರ ಜನಸ್ತೋಮ ಸೇರಿದ್ದರಿಂದ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಖಾನಾಪುರದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಹೆಚ್ಚುವರಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇತ್ತು, ಈ ಎಲ್ಲ ಅಂಶಗಳು ಸಹ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಸಾಧ್ಯತೆ ಇತ್ತು. ಹಾಗಾಗಿ ಬೇರೆಡೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಟಿ ರವಿ ರವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಖಾನಾಪುರದಿಂದ ಅವರನ್ನು ರಾಮದುರ್ಗಕ್ಕೆ ಸ್ಥಳಾಂತರಿಸಲಾಯಿತು. ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗಿಯೂ ಮಾಧ್ಯಮಗಳು ಹಾಗೂ ಇನ್ನಿತರ ವ್ಯಕ್ತಿಗಳು ಬೆಂಗಾವಲು ಪಡೆ ಹಿಂಬಾಲಿಸಿದರು. ಸಿ.ಟಿ. ರವಿ ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಾವಲು ಪಡೆ ಅವರೆಲ್ಲರಿಂದ ತಪ್ಪಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಪ್ರಕ್ರಿಯೆಯುದ್ದಕ್ಕೂ ಪೊಲೀಸರು ಸಿ.ಟಿ. ರವಿ ಅವರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಿದ್ದಾರೆ. ಮರುದಿನ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಾರ್ಟಿನ್ ತಿಳಿಸಿದ್ದಾರೆ.