ಉತ್ತರ ಕರ್ನಾಟಕ ಭಾಗದಲ್ಲಿ ಧೂಳೆಬ್ಬಿಸಿರುವ "ಕಲ್ಟ್‌ " ಚಿತ್ರದ ಪ್ರಮೋಶನ್‌ ಭಾನುವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ಕಾಂಗ್ರೆಸ್‌ ಮುಖಂಡ ವಿಶಾಲ್‌ ಅಬ್ಬಯ್ಯ ನೇತೃತ್ವದಲ್ಲಿ ಅದ್ಧೂರಿಯಾಗಿ ನೆರವೇರಿತು.

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಧೂಳೆಬ್ಬಿಸಿರುವ "ಕಲ್ಟ್‌ " ಚಿತ್ರದ ಪ್ರಮೋಶನ್‌ ಭಾನುವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ಕಾಂಗ್ರೆಸ್‌ ಮುಖಂಡ ವಿಶಾಲ್‌ ಅಬ್ಬಯ್ಯ ನೇತೃತ್ವದಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಪೂರ್ವದಲ್ಲಿ ಘಂಟಿಕೇರಿ ನೆಹರೂ ಕಾಲೇಜಿನಿಂದ ಸ್ಟೇಷನ್ ರಸ್ತೆ ಮುಖಾಂತರ ಕಲಾವಿದರನ್ನು ಸಾವಿರಾರು ಅಭಿಮಾನಿಗಳು ಬೈಕ್ ರ‍್ಯಾಲಿ ಮೂಲಕ ನೆಹರೂ ಮೈದಾನಕ್ಕೆ ಕರೆತಂದರು. ಮುಖ್ಯ ವೇದಿಕೆಗೆ ಚಿತ್ರದ ನಾಯಕನಟ ಝೈದ್‌ ಖಾನ್‌ ಕುದುರೆ ಸವಾರಿ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.

ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ಝೈದ್‌ ಖಾನ್‌, ಚಿತ್ರದಲ್ಲಿನ ಕೆಲವು ಡೈಲಾಗ್ ಹೇಳಿ, ಜ. 23 ರಂದು ಚಿತ್ರ ಬಿಡುಗಡೆಯಾಗಲಿದ್ದು, ನಿಮ್ಮೆಲ್ಲರ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ಅಭಿಮಾನಿಗಳನ್ನು ಕಂಡು ತುಂಬಾ ಸಂತಸವಾಗುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ತೆರಳಿ ಚಲನಚಿತ್ರ ವೀಕ್ಷಿಸುವಂತೆ ಮನವಿ ಮಾಡಿದರು. ಬಳಿಕ ನಾಯಕನಟಿ ಮಲೈಕಾ ವಸುಪಾಲ್‌ರೊಂದಿಗೆ ಝೈದ್‌ ಖಾನ್‌ ತಮ್ಮ ಚಿತ್ರದ ಹಾಡಾದ ಅಯ್ಯೋ ಶಿವನೇ... ಸೇರಿದಂತೆ ಹಲವು ಹಾಡುಗಳಿಗೆ ಹೆಜ್ಜೆ ಹಾಕಿದರು.

ಆಲ್‌ ಓಕೆ ಖ್ಯಾತಿಯ ಅಲೋಕ ಬಾಬು, ಜಸ್ಕರಣ ಸಿಂಗ್‌, ಗಾಯಕ ನಿಶಾನ್‌ ಅವರು ಹಾಡುಗಳಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಬಳಿಕ ಹಲವು ಕಲಾವಿದರ ನೃತ್ಯಕ್ಕೆ ಹಾಗೂ ಗಾಯಕರ ಹಾಡಿಗೆ ಪ್ರೇಕ್ಷಕರು ಸಹ ತಾವಿದ್ದ ಸ್ಥಳದಿಂದಲೇ ಹೆಜ್ಜೆ ಹಾಕಿ ಸಂಭ್ರಮಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ನಿರ್ದೇಶಕ ಅನಿಲಕುಮಾರ ಸೇರಿದಂತೆ ಹಲವರಿದ್ದರು.