ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಕೆ.ಆರ್.ಪೇಟೆ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಕಸನಗೊಳಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ, ಸಂಸ್ಕೃತಿ ಸಂಭ್ರಮ ಹಾಗೂ ವಿವಿಧ ವೈಜ್ಞಾನಿಕ ಮಾದರಿಗಳ ಪ್ರದರ್ಶನ ವೇಳೆ ಮಾತನಾಡಿದರು.

ಜ್ಞಾನ ಎಂದರೆ ಕೇವಲ ಪುಸ್ತಕದ ಅಧ್ಯಯನವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ. ಪ್ರಾಚೀನ ಕಾಲದಿಂದಲೂ ನಮ್ಮ ಋಷಿ ಮುನಿಗಳು ವೇದ ಮತ್ತು ವಿಜ್ಞಾನದ ಆವಿಷ್ಕಾರಗಳನ್ನು ಸಮ್ಮಿಲನಗೊಳಿಸಿ ನಮಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ವಿಜ್ಞಾನದ ಆವಿಷ್ಕಾರಗಳು ನಮ್ಮ ಬದುಕಿನ ಭಾಗವಾಗಿವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಎಂದರು.

ಸಂಸ್ಕಾರವಿಲ್ಲದ ಶಿಕ್ಷಣದಿಂದ ನಾವು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮಾರಕವಾದ ಮೊಬೈಲ್ ಫೋನ್ ನಿಂದ ದೂರವಿಡಬೇಕು. ಮೊಬೈಲ್ ಚಾಟಿಂಗ್, ವಿಡಿಯೋ ಗೇಮ್ , ಫೇಸ್ ಬುಕ್, ವಾಟ್ಸಾಪ್ ಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಯಾವುದೇ ಸಹಾಯ ವಾಗುವುದಿಲ್ಲ ಎಂದು ಎಚ್ಚರಿಸಿದರು.


ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವವು ಸಮಗ್ರವಾಗಿ ವಿಕಾಸಗೊಳ್ಳಲು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಅಗತ್ಯ. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಆವಿಷ್ಕಾರಗಳ ಪ್ರಯೋಜನವನ್ನು ಪಡೆದುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ವೇಳೆ ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಆಸರೆ ಎಚ್.ಬಿ.ಮಂಜುನಾಥ್, ವಕೀಲರಾದ ರಾಜೇಗೌಡ, ಚಟ್ಟಂಗೆರೆ ನಾಗೇಶ್ ಸೇರಿದಂತೆ ಹಲವರು ಇದ್ದರು.