ಕ್ರೀಡೆ ಎಂಬುದು ಕೇವಲ ದೈಹಿಕ ವ್ಯಾಯಾಮವಲ್ಲ, ಅದಕ್ಕೆ ಚುರುಕುತನ, ಸಮಯಪ್ರಜ್ಞೆ, ಕಣ್ಣು-ಕೈ-ಕಾಲುಗಳ ಸರಿಯಾದ ಸಂಯೋಜನೆ ಹಾಗೂ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅಗತ್ಯ. ಯುವಜನತೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗದಗ

ಕ್ರೀಡೆ ಎಂಬುದು ಕೇವಲ ದೈಹಿಕ ವ್ಯಾಯಾಮವಲ್ಲ, ಅದಕ್ಕೆ ಚುರುಕುತನ, ಸಮಯಪ್ರಜ್ಞೆ, ಕಣ್ಣು-ಕೈ-ಕಾಲುಗಳ ಸರಿಯಾದ ಸಂಯೋಜನೆ ಹಾಗೂ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅಗತ್ಯ. ಯುವಜನತೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರಿಧರ್ ತಿಳಿಸಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ (ಹಾಕಿ ಮತ್ತು ವಾಲಿಬಾಲ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲೇ ನಮ್ಮ ಜಿಲ್ಲೆಯು ಇತರ ಜಿಲ್ಲೆಗಳಿಗಿಂತ ಹೆಚ್ಚಿನ ಮತ್ತು ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಪ್ರಸ್ತುತ ವಿಭಾಗ ಮಟ್ಟದ ವಾಲಿಬಾಲ್ ಹಾಗೂ ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಕ್ರೀಡೆಗಳನ್ನು ಈ ಜಿಲ್ಲೆಯಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗ ಮಟ್ಟದ ಪಂದ್ಯಾವಳಿಗಳು ರಾಜ್ಯ ಮಟ್ಟದ ಮೈಸೂರು ದಸರಾ ಕ್ರೀಡಾಕೂಟಕ್ಕೆ ಪೂರಕವಾಗಿವೆ. ಇಲ್ಲಿ ಗೆದ್ದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿಭಾಗಕ್ಕೆ ಕೀರ್ತಿ ತರಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಮಾತನಾಡಿ, ಸರ್ಕಾರವು ಪ್ರತಿ ವರ್ಷ ಹಬ್ಬದ ವಾತಾವರಣದಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಯಾವುದೇ ವಯಸ್ಸಿನ ಮಿತಿಯಿಲ್ಲದೆ ಎಲ್ಲಾ ಕ್ರೀಡಾಪಟುಗಳು ಮುಕ್ತವಾಗಿ ಭಾಗವಹಿಸಲು ಇದು ಉತ್ತಮ ವೇದಿಕೆಯಾಗಿದೆ. ಬೆಳಗಾವಿ ವಿಭಾಗದ 7 ಕಂದಾಯ ಜಿಲ್ಲೆಗಳಿಂದ ಆಗಮಿಸಿರುವ ಪುರುಷ ಮತ್ತು ಮಹಿಳಾ ವಾಲಿಬಾಲ್ ಹಾಗೂ ಹಾಕಿ ತಂಡಗಳು ಇಲ್ಲಿ ಭಾಗವಹಿಸಿವೆ. ಈ ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳು ಅ. 11ರಿಂದ 14ರ ವರೆಗೆ (4 ದಿನಗಳು) ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ವೇಳೆ ಸರ್ಪರಾಜ ಶೇಖ್, ರಾಷ್ಟ್ರೀಯ ರೆಫರಿ ವೈ.ಕೆ. ಚೌಡಾಪುರ, ಮಾಜಿ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಇಕ್ಬಾಲ್ ಮುಲ್ಲಾ ಸೇರಿ ವಿವಿಧ ಜಿಲ್ಲೆಯ ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು, ದೈಹಿಕ ತರಬೇತುದಾರರು ಇದ್ದರು. ವೆಂಕಟೇಶ್ ಆಲ್ಕೋಡ ಹಾಗೂ ತಂಡ ರಾಷ್ಟಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ಎಂ.ಎಸ್. ಕುಚಬಾಳ ನಿರೂಪಿಸಿದರು. ಚಂದ್ರಶೇಖರ ಮೇಲಿನಮನಿ ವಂದಿಸಿದರು.