ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳಿಗೆ ಮನೆಯಲ್ಲಿಯೇ ಸಾಹಿತ್ಯದ ಅಭಿರುಚಿ ಬೆಳೆಸುವಂತಾಗಬೇಕು. ಪಠ್ಯಪುಸ್ತಕದ ಜೊತೆಗೆ ಉತ್ತಮ ಸಾಹಿತ್ಯ ಕೃತಿಗಳ ಓದುವುದನ್ನು ಬೆಳೆಸಿಕೊಂಡಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಎಚ್.ಎಲ್.ಮಲ್ಲೇಶ್ ಗೌಡ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕ ವತಿಯಿಂದ ‘ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪಂಜೆ ಮಂಗೇಶರಾಯರ ಕೊಡುಗೆ ಅಪಾರವಾಗಿದೆ. 20ನೇ ಶತಮಾನದ ಹಾದಿಯಲ್ಲಿ ಕೊಡಗಿನ ಶ್ರೀಮಂತಿಕೆಯನ್ನು ವರ್ಣಿಸಿದ್ದಾರೆ. ಕೊಡಗಿನ ಸಿರಿಯನ್ನು ಕನ್ನಡ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.ಕನ್ನಡ ಸಾಹಿತ್ಯವು ಜಗತ್ತಿನಲ್ಲಿಯೇ ಹೆಚ್ಚಿನ ಕೃತಿಗಳು ಪ್ರಕಟವಾಗುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಕನ್ನಡದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಕನ್ನಡದ ಮಹತ್ವದ ಕೃತಿಗಳನ್ನಾದರೂ ಓದಬೇಕು. ಗ್ರಂಥಾಲಯದ ಪುಸ್ತಕ ಅಧ್ಯಯನ ಮಾಡಬೇಕು. ಇದರಿಂದ ಬದುಕನ್ನು ಗಟ್ಟಿಗೊಳಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
‘ವಿದ್ಯಾರ್ಥಿಗಳು ಪಠ್ಯ ಪುಸ್ತಕ ಓದುವುದೇ ಕಡಿಮೆಯಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿಕೊಂಡು ಪರೀಕ್ಷೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಇಡೀ ಪುಸ್ತಕ ಅಧ್ಯಯನ ಮಾಡಿ ಪರೀಕ್ಷೆಗೆ ಉತ್ತರಿಸುವ ಛಾಪು ಬೆಳೆಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.’ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆ ಬರೆದು 101 ವರ್ಷ ಆಗಿದೆ. ಆನರ್ಸ್ ಅಧ್ಯಯನ ಮಾಡುವಾಗ ನಾಡಗೀತೆಯನ್ನು ಬರೆದಿದ್ದಾರೆ ತಿಳಿಸಿದರು.
‘ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ ಮಾತನಾಡಿ ಮಕ್ಕಳನ್ನು ಕಲ್ಪನಾ ಲೋಕದಲ್ಲಿ ಬೆಳೆಸಿದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.’ಪಂಜೆ ಮಂಗೇಶರಾಯರು ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಒಳಗೊಂಡ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲೂ ಕೊಡಗಿನ ಶ್ರೀಮಂತಿಕೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪಂಜೆ ಮಂಗೇಶರಾಯರನ್ನು ಸದಾ ಸ್ಮರಿಸಿಕೊಳ್ಳುವಂತಾಗಬೇಕು. ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ದುಡಿದಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ ಅವರು ಮಾತನಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ನಿಸ್ಸಾರ್ ಅಹಮದ್ ಅವರು ಶಿವಮೊಗ್ಗದ ‘ಜೋಗದ ಸಿರಿ’ ಬಗ್ಗೆ ವರ್ಣಿಸಿದ್ದಾರೆ. ಅದೇ ರೀತಿ ಪಂಜೆ ಮಂಗೇಶರಾಯರು ‘ಎಲ್ಲಿ ಭೂರಮೆ...’ ಕೊಡಗಿನ ಶ್ರೀಮಂತಿಕೆ ಬಗ್ಗೆ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ ಎಂದು ನುಡಿದರು.ಪಂಜೆ ಮಂಗೇಶರಾಯರು 1874 ಫೆಬ್ರವರಿ, 22 ರಂದು ಜನಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ‘ಕವಿಶಿಷ್ಯ’ ಕಾವ್ಯನಾಮದಿಂದ ಖ್ಯಾತರಾಗಿದ್ದು, ಕನ್ನಡ ಭಾಷೆಯ ಅಧ್ಯಾಪಕರಾಗಿ, ಶಾಲಾ ಇನ್ಸ್ಪೆಕ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಪಂಜೆ ಮಂಗೇಶರಾಯರ ಕೊಡುಗೆ ಅಪಾರವಾಗಿದೆ. ಸಣ್ಣ ಕತೆಗಳ ಜನಕ, ಮಕ್ಕಳ ಸಾಹಿತ್ಯದ ಮೇರು ಶಿಖರ ಎಂದರೆ ತಪ್ಪಾಗಲಾರದು ಎಂದು ವಿವರಿಸಿದರು.‘ಕನ್ನಡ ಸಾಹಿತ್ಯವು ಶ್ರೀಮಂತವಾಗಿದ್ದು, ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನು ಪಕ್ಕದ ರಾಜ್ಯಗಳಿಗೂ ಪರಿಚಯಿಸುವಂತಾಗಬೇಕು ಎಂದು ಮಡ್ಡಿಕೆರೆ ಗೋಪಾಲ ಅವರು ಕರೆ ನೀಡಿದರು.’
ಕನ್ನಡ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸಿದಲ್ಲಿ ಮತ್ತಷ್ಟು ಕನ್ನಡ ಭಾಷೆ ಶ್ರೀಮಂತಿಕೆ ಕಾಣಬಹುದು. ಕುವೆಂಪು ಭಾಷಾ ಭಾರತಿಯು ಹಲವು ಚಟುವಟಿಕೆಗಳನ್ನು ನಡೆಸುತ್ತಿದ್ದು, ಪಂಜೆ ಮಂಗೇಶರಾಯರ ಸಾಹಿತ್ಯ ಭಾಷಾಂತರವಾಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ದೊಡ್ಡ ಶಕ್ತಿ ಇದೆ. ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಇಡೀ ವಿಶ್ವದ ಜನರು ಓದುತ್ತಾರೆ ಎಂದರು.‘ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ ನಗರದ ಸೆಂಟ್ರಲ್ ಕಾಲೇಜಿನಲ್ಲಿ ಓದಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಇನ್ನೂ ಹಲವು ಮಹನೀಯರು ಕಾಲೇಜಿನಲ್ಲಿ ಓದಿರುವುದು ಸ್ಮರಣೀಯ ಎಂದರು.’
ಕನ್ನಡ ಸಾಹಿತ್ಯ ಹಾಗೂ ಕೊಡಗಿನ ಶ್ರೀಮಂತಿಕೆ ಬಗ್ಗೆ ಪಂಜೆ ಮಂಗೇಶರಾಯರ ಕೊಡುಗೆ ಅಪಾರವಾಗಿದೆ. ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಕೇಶವ ಕಾಮತ್ ಅವರು ಮಾತನಾಡಿ ಪಂಜೆ ಮಂಗೇಶರಾಯರು ಶಿಶು ಸಾಹಿತ್ಯದ ಜನಕ, ಪುತ್ತರಿ ಹಾಡಿನ ಪಿತಾಮಹ ಎಂದರು.
ಸಾಹಿತಿ ಜಲಜಾ ಶೇಖರ್ ಅವರು ಬರೆದಿರುವ ‘ಅಗ್ನಿಕುಂಡ’ ಕಥಾ ಸಂಕಲನ ಪುಸ್ತಕವನ್ನು ಮಲ್ಲೇಶ್ ಗೌಡ ಅವರು ಬಿಡುಗಡೆ ಮಾಡಿದರು. ಹಾಗೆಯೇ ಉಳುವಂಗಡ ಕಾವೇರಿ ಅವರು ಬರೆದಿರುವ ಪುಸ್ತಕವನ್ನು ಟಿ.ಪಿ.ರಮೇಶ್ ಅವರು ಬಿಡುಗಡೆ ಮಾಡಿದರು.ಕಾವ್ಯಗುಚ್ಛ ಗಾಯನ ಮೂಲಕ ಚಿತ್ರಕಲಾ ಶಿಕ್ಷಕರಾದ ಬಿ.ಆರ್.ಸತೀಶ್ ಮತ್ತು ಹಿನ್ನೆಲೆ ಗಾಯಕರಾದ ಮೋಹನ್ ಅವರು ಚಿತ್ರಕಲೆ ಬಿಡಿಸಿದರು ಹಾಗೂ ಗಾಯನ ಮಾಡಿದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹಮ್ಮದ್, ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಕಡ್ಲೇರ ತುಳಸಿ ಮೋಹನ್, ಎಸ್.ಡಿ.ವಿಜೇತ್, ರಾಜೇಂದ್ರ ಪದ್ಮನಾಭ, ಕೆ.ಎಸ್.ನಾಗೇಶ್, ಅನಿಲ್ ಎಚ್.ಟಿ., ಜಿ.ಚಿದ್ವಿಲಾಸ್, ಕಾವೇರಿ ಪ್ರಕಾಶ್, ಅಂಬೆಕಲ್ಲು ನವೀನ್, ರಂಜಿತ್ ಕವಲಪಾರ, ಜಲಜಾ ಶೇಖರ್, ಈರಮಂಡ ಹರಿಣಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ, ಡಾ.ಕಾವೇರಿ ಪ್ರಕಾಶ್, ಟಿ.ಜಿ.ಪ್ರೇಮ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇತರರು ಇದ್ದರು.