ಚನ್ನಪಟ್ಟಣ: ಆಧುನಿಕ ಎಐ ಆಧಾರಿತ ಶಿಕ್ಷಣದಿಂದ ನಾಡು-ನುಡಿ ಬಗ್ಗೆ ಅಭಿಮಾನ, ಪ್ರೀತಿ, ಮಮತೆ, ವಾತ್ಸಲ್ಯ ಹಾಗೂ ಭಾವನಾತ್ಮಕ ಭಾವನೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಸಾಹಿತ್ಯದಿಂದ ಮಾತ್ರ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದು ಇಂದಿನ ಅಗತ್ಯ ಎಂದು ನಿವೃತ್ತ ಅಧ್ಯಾಪಕ ಸಿ. ಚನ್ನವೀರೇಗೌಡ ಅಭಿಪ್ರಾಯಪಟ್ಟರು

ಚನ್ನಪಟ್ಟಣ: ಆಧುನಿಕ ಎಐ ಆಧಾರಿತ ಶಿಕ್ಷಣದಿಂದ ನಾಡು-ನುಡಿ ಬಗ್ಗೆ ಅಭಿಮಾನ, ಪ್ರೀತಿ, ಮಮತೆ, ವಾತ್ಸಲ್ಯ ಹಾಗೂ ಭಾವನಾತ್ಮಕ ಭಾವನೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಸಾಹಿತ್ಯದಿಂದ ಮಾತ್ರ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದು ಇಂದಿನ ಅಗತ್ಯ ಎಂದು ನಿವೃತ್ತ ಅಧ್ಯಾಪಕ ಸಿ. ಚನ್ನವೀರೇಗೌಡ ಅಭಿಪ್ರಾಯಪಟ್ಟರು.

ದಿ ಆಪಲ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಹಾಗೂ ಚನ್ನಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ದೇವೀರಮ್ಮ ಶಿವಲಿಂಗೇಗೌಡ ಮತ್ತು ಹನುಮಾಪುರದೊಡ್ಡಿ ಲಕ್ಷ್ಮಮ್ಮ ರಾಮೇಗೌಡ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಅಭಿರುಚಿಯನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ದತ್ತಿಗಳ ಮೂಲಕ ನಡೆಯುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ಶಾಲಾ ಪಿಆರ್‌ಒ ಡಾ.ವಿಜಯ್ ರಾಂಪುರ ಉಪನ್ಯಾಸ ನೀಡಿ, ಚನ್ನಪಟ್ಟಣ ತಾಲೂಕು ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಗಂಗರು, ಚೋಳರು, ಮೈಸೂರು ಸಂಸ್ಥಾನ ಹಾಗೂ ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿದ್ದ ಚನ್ನಪಟ್ಟಣ ಐತಿಹಾಸಿಕವಾಗಿ ಆಯಕಟ್ಟಿನ ಪ್ರದೇಶವಾಗಿತ್ತು ಎಂದು ವಿವರಿಸಿದರು.

ಶ್ರವ್ಯ, ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಜೊತೆಗೆ ಸಾಮಾಜಿಕ ಜಾಲತಾಣಗಳು ಇಂದು ಪ್ರಭಾವಶಾಲಿ ಮಾಧ್ಯಮಗಳಾಗಿ ಬೆಳೆದಿವೆ. ಆದರೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಯುವಜನರು ದಿಕ್ಕು ತಪ್ಪುತ್ತಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಯುವಜನರು ಮಾಧ್ಯಮಗಳನ್ನು ಬಳಸುವಾಗ ಸೂಕ್ತ ಎಚ್ಚರಿಕೆ ಮತ್ತು ವಿವೇಚನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಾನಪದ ಕೇವಲ ಒಂದು ಕಲೆಯಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜನಪದರ ಆಚಾರ-ವಿಚಾರ, ಭಾಷೆ, ಆಹಾರ ಪದ್ಧತಿ, ಸಂಪ್ರದಾಯ ಹಾಗೂ ಸಂಬಂಧಗಳಲ್ಲಿನ ಜೀವನಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಇವುಗಳನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ದತ್ತಿಗಳು ಮಹತ್ವದ ಪಾತ್ರ ವಹಿಸುತ್ತವೆ. ದತ್ತಿ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಮನೆಮನೆಗೂ ತಲುಪಬೇಕು. ಕನ್ನಡ ಸಾಹಿತ್ಯ ಮನುಷ್ಯನ ಬದುಕನ್ನು ಸುಂದರಗೊಳಿಸುವ ಕಲ್ಪವೃಕ್ಷವಾಗಿದೆ ಎಂದರು.

ದಿ ಆಪಲ್ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಅಭ್ಯಾಸ್ ಅಕಾಡೆಮಿ ಮುಖ್ಯಸ್ಥ ಸಿ.ಎಂ.ಅಂಬರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದತ್ತಿದಾನಿ ಚ.ಶಿ.ವೆಂಕಟೇಗೌಡ, ಕಾಲೇಜಿನ ನಿರ್ದೇಶಕ ಕೃಷ್ಣ ಸಾಹಿತ್ಯ ಪರಿಷತ್ತು ಪದಾಧಿಕಾರಿ ಚೆಕ್ಕರೆ ಪುಟ್ಟಸ್ವಾಮಿ, ಬಸವರಾಜು ನಾಗವಾರ ಮುಂತಾದವರು ಹಾಜರಿದ್ದರು.

ಇದೇ ವೇಳೆ ಜಾನಪದ ಗಾಯಕ ಚೌ.ಪು.ಸ್ವಾಮಿ ಹಾಗೂ ಕುಂತೂರು ಕುಮಾರ್ ಗೀತಗಾಯನ ನಡೆಸಿಕೊಟ್ಟರು.

ಪೊಟೋ೮ಸಿಪಿಟಿ೨:ಚನ್ನಪಟ್ಟಣದ ದಿ ಆಪಲ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದೇವೀರಮ್ಮ ಶಿವಲಿಂಗೇಗೌಡ ಮತ್ತು ಹನುಮಾಪುರದೊಡ್ಡಿ ಲಕ್ಷ್ಮಮ್ಮ ರಾಮೇಗೌಡ ದತ್ತಿ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.