ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಸುಶೀಲಾ

| Published : Feb 03 2024, 01:46 AM IST

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಸುಶೀಲಾ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯದಲ್ಲಿರುವ ಜೀವನ ಮೌಲ್ಯಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಬದುಕಿನಲ್ಲಿ ಅಳವಡಿಸಿಕೊಂಡು ಸಾಧನಾ ಪರರಾದಾಗ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿ ಸುಶೀಲಾ ಸದಾಶಿವಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕನ್ನಡ ಸಾಹಿತ್ಯದಲ್ಲಿರುವ ಜೀವನ ಮೌಲ್ಯಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಬದುಕಿನಲ್ಲಿ ಅಳವಡಿಸಿಕೊಂಡು ಸಾಧನಾ ಪರರಾದಾಗ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿ ಸುಶೀಲಾ ಸದಾಶಿವಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸತ್ಯಮಂಗಲದ ಶಿವಾನಂದ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯವನ್ನು ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಪಠ್ಯವಿಷಯಗಳಿಗೆ ಗಮನ ನೀಡಿದಂತೆಯೇ ಪಠ್ಯೇತರ ವಿಷಯಗಳಿಗೂ ಆದ್ಯತೆ ನೀಡಬೇಕು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಗುರುಹಿರಿರಿಗೆ ಭಕ್ತಿ ಗೌರವವನ್ನು ನೀಡುವ ವಿನಯವಂತಿಕೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಚನ ಸಾಹಿತ್ಯದ ಮಹತ್ವವನ್ನು ಕುರಿತು ಉಪನ್ಯಾಸ ನೀಡಿದ ಲೇಖಕಿ ನಾಗರತ್ನ ಚಂದ್ರಪ್ಪ ಮಾತನಾಡಿ, ಹನ್ನೆರಡನೆಯ ಶತಮಾಣದ ಬಸವಣ್ಣ, ಅಕ್ಕಮಹಾದೇವಿ, ಪ್ರಭುದೇವರು ಹಾಗೂ ಸಿದ್ಧರಾಮೇಶ್ವರರೇ ಮೊದಲಾದ ವಚನಕಾರರು ನಮಗೆ ಜೀವನ ಮೌಲ್ಯಗಳನ್ನು ಸಾರಿದ್ದಾರೆ. ನಡೆ-ನುಡಿ, ಆಚಾರ-ವಿಚಾರಗಳ ಮೂಲಕ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳುವ ದಾರಿ ತೋರಿಸಿದ್ದಾರೆ ಎಂದು ತಿಳಿಸಿದರು.

ಧರ್ಮ ಸಮನ್ವಯತೆಯನ್ನು ಕುರಿತು ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್‌ ಮಾತನಾಡಿ, ಅಜ್ಞಾನ, ಅಶಾಂತಿ, ಅಸಹನೆ ತುಂಬಿರುವ ಇಂದಿನ ಸಾಮಾಜಿಕ ವ್ಯವಸ್ಥೆಗೆ ವಚನಕಾರರು ಪ್ರತಿಪಾದಿಸಿದ ಧರ್ಮಸಮನ್ವಯದ ಅರಿವು ಅಗತ್ಯವಾಗಿದೆ. ದಯವೇ ಧರ್ಮದ ಮೂಲವೆಂದು ವಚನಕಾರರು ಸಾರಿದರು. ಧರ್ಮವೆಂದರೆ ಜನರನ್ನೂ ಒಂದುಗೂಡಿಸಬೇಕೇ ಹೊರತು ಒಡೆಯಬಾರದು ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶನ ಸಮಿತಿ ಸಂಚಾಲಕ ಕೆ.ಎಸ್. ಉಮಾಮಹೇಶ್ ಮಾತನಾಡಿ, ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳ ಹಿರಿಮೆಯನ್ನು ಅರಿತುಕೊಂಡು ಅದನ್ನು ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಎನ್. ನರೇಂದ್ರನಾಯಕ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಶಶಿಕುಮಾರ್‌, ನಿವೃತ್ತ ಶಿಕ್ಷಕರಾದ ಹನುಮಂತಯ್ಯ, ಬಸವರಾಜು ಹಾಜರಿದ್ದರು. ಕನ್ನಡ ಶಿಕ್ಷಕ ಜಗದೀಶ್ ನಿರೂಪಿಸಿದರು.