ಸಾಹಿತ್ಯವು ಮನುಷ್ಯನನ್ನು ಸಾವಿಲ್ಲದಂತೆ ಉಳಿಸುತ್ತದೆ. ಸಮಾಜದಲ್ಲಿನ ಕೆಟ್ಟ ಅಥವಾ ರಾಕ್ಷಸಿ ಪ್ರವೃತ್ತಿಗಳನ್ನು ಬಿಟ್ಟು, ಸಾಹಿತ್ಯಿಕ ಚಿಂತನೆ ಮತ್ತು ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮುಂಡರಗಿ

ಸಾಹಿತ್ಯವು ಮನುಷ್ಯನನ್ನು ಸಾವಿಲ್ಲದಂತೆ ಉಳಿಸುತ್ತದೆ. ಸಮಾಜದಲ್ಲಿನ ಕೆಟ್ಟ ಅಥವಾ ರಾಕ್ಷಸಿ ಪ್ರವೃತ್ತಿಗಳನ್ನು ಬಿಟ್ಟು, ಸಾಹಿತ್ಯಿಕ ಚಿಂತನೆ ಮತ್ತು ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡು-ನುಡಿಯನ್ನು ಪ್ರೀತಿಸಿ, ಬೆಳೆಸುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮುಂಡರಗಿ ತಾಲೂಕು ಘಟಕದ ಆಶ್ರಯದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದ ವಾರ್ಷಿಕೋತ್ಸವ, ಗುರುವಂದನೆ, ಗ್ರಂಥ ಬಿಡುಗಡೆ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕರು ಮತ್ತು ಪತ್ರಕರ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ನೇತೃತ್ವದಲ್ಲಿ 5 ವರ್ಷಗಳಲ್ಲಿ 300ಕ್ಕೂ ಹೆಚ್ಚು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ ದಾಖಲಿಸಿರುವ ಕಾರ್ಯ ಶ್ಲಾಘನೀಯ. ತಾಲೂಕಾ ಸಮ್ಮೇಳಕ್ಕೆ ಅನೇಕ ಬಾರಿ ವಿರೋಧಿಸಿದ್ದು, ಕೇವಲ ವಿರೋಧ ಮಾಡುವುದು ಅಥವಾ ತಕರಾರು ತೆಗೆಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯಾವುದೇ ಅಡೆತಡೆಗಳನ್ನು ಲೆಕ್ಕಿಸದೆ ನಿರಂತರವಾಗಿ ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನೆಲೆ ಶ್ರೀಗಳಿಗೆ ಕಸಾಪ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರೀಗಳ ಕೃಪಾಶೀರ್ವಾದ ಮತ್ತು ಕನ್ನಡಾಭಿಮಾನಿಗಳ, ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿಯೇ ಅತ್ಯಂತ ಭವ್ಯವಾದ ಸಾಹಿತ್ಯ ಭವನ ನಿರ್ಮಿಸುವುದರ ಜೊತೆಗೆ ನಿರಂತರ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸುವರ್ಣ ಯುಗವನ್ನು ಸೃಷ್ಟಿಸಿದೆ ಎಂದರು.

ಇನ್ನೋರ್ವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡಪ್ಪ ಲಮಾಣಿ ಅವರಿಗೆ ಗೌರವ ಸನ್ಮಾನ ಜರುಗಿತು. ಬಳಿಕ ಕೃಷಿ ಸಂಸ್ಕೃತಿ ಸಾರುವ ಹಂತಿ ಪದಗಳನ್ನು ಹಾಡುವ ಮೂಲಕ ಗಮನ ಸೆಳೆದರು.

ವೀಣಾ ಹೇಮಂತಗೌಡ ಪಾಟೀಲ ಅವರ ನೆಲಕ್ಕೆ ಬಿದ್ದ ಹೂವುಗಳು ಕಥಾ ಸಂಕಲನ ಹಾಗೂ ಅಕ್ಕಮಹಾದೇವಿ ಕೊಟ್ಟೂರಶೆಟ್ಟರ್ ಅವರ ಭಾವಝರಿ ಕವನ ಸಂಕಲನಗಳನ್ನು ಅನ್ನದಾನೀಶ್ವರ ಮಹಾಶಿವಯೋಗಿಗಳು ಲೋಕಾರ್ಪಣೆಗೊಳಿಸಿದರು. ಪತ್ರಕರ್ತರನ್ನು ಹಾಗೂ ವಿವಿಧ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಲತಾಬ ಕಡ್ಡಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ತನ್ವಿ ತಾವರಗೇರಿ ಗಾಂಧಾರಿ ವಿದ್ಯ ಪ್ರದರ್ಶಿಸಿದರು.

ಈ ಸಂದರ್ಭ ಎಸ್.ಬಿ. ಹಿರೇಮಠ, ನಾಗೇಶ ಹುಬ್ಬಳ್ಳಿ, ಪ್ರೊ. ಎ.ಬಿ. ಹಿರೇಮಠ, ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ, ಎಸ್.ಬಿ.ಕೆ. ಗೌಡರ್, ಎ.ವೈ. ನವಲಗುಂದ, ವೀರನಗೌಡ ಗುಡದಪ್ಪನವರ, ಶಂಕರ ಕುಕನೂರ, ಸಿ.ಕೆ. ಗಣಪ್ಪನವರ, ಆರ್.ವೈ. ಪಾಟೀಲ, ಕೃಷ್ಣಾ ಸಾಹುಕಾರ, ಮಂಜುಳಾ ಇಟಗಿ, ಕೆ.ಕೆ. ಬಿಳಿಮಗ್ಗದ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಸುರೇಶ ಭಾವಿಹಳ್ಳಿ ಸೇರಿದಂತೆ ಅನೇಕರಿದ್ದರು. ತಾಲೂಕಾ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ಸ್ವಾಗತಿಸಿದರು. ಮಂಜುನಾಥ ಮುಧೋಳ ನಿರೂಪಿಸಿದರು. ಎಂ.ಐ. ಮುಲ್ಲಾ ವಂದಿಸಿದರು.