ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ
ಕನ್ನಡಪ್ರಭ ವಾರ್ತೆ ಹೊನ್ನಾವರ
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಜಾತಿ-ಧರ್ಮ, ಮತ, ಪಂಗಡ ಎನ್ನುವ ಬೇಧ ಇರಬಾರದು. ದೇಶದ ಗಡಿಯ ವಿಚಾರಗಳಲ್ಲಿ ನಾವೆಲ್ಲರೂ ಗೌರವವನ್ನು ಇಟ್ಟುಕೊಳ್ಳಬೇಕು. ರಾಷ್ಟ್ರೀಯ ಭಾವೈಕ್ಯತೆ ನಾವೆಲ್ಲರೂ ಹೊಂದಿರಬೇಕು ಎಂದು ತಹಸೀಲ್ದಾರ ಪ್ರವೀಣ್ ಕರಾಂಡೆ ಹೇಳಿದರು.
ತಾಲೂಕಿನ ಆಡಳಿತಸೌಧದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ತ್ಯಾಗ ಮತ್ತು ಬಲಿದಾನದಿಂದಾಗಿದೆ. ಸತ್ಯಾಗ್ರಹ, ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ನಾವು ಅರ್ಥ ಮಾಡಿಕೊಂಡು ಕಾಪಾಡಿಕೊಂಡು ಹೋಗಬೇಕು. ದೇಶ ಇಂದು ಪ್ರಗತಿಪಥದತ್ತ ಸಾಗಿದೆ. ಭಾರತ ಎಲ್ಲಾ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ, ತಂತ್ರಜ್ಞಾನ ಇವೇ ಮೊದಲಾದ ಕ್ಷೇತ್ರಗಳಲ್ಲಿ ನಾವು ಉತ್ತಮ ಸಾಧನೆಯನ್ನು ಮಾಡುತ್ತಿದ್ದೇವೆ. ದೇಶಕ್ಕೆ ಉನ್ನತ ಪರಂಪರೆ ಇದೆ. ಇದು ಹೆಮ್ಮೆಯ ವಿಚಾರವಾಗಿದೆ. ಸಮಸ್ಯೆಗಳು ಇವೆ ಆದರೆ ಅದನ್ನು ಮೀರಿ ನಾವು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ರೈತರಿಗೆ ಗೌರವವನ್ನು ನೀಡಬೇಕು. ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಬೇಕು. ಕರ್ತವ್ಯ ನಿಷ್ಠೆಯಿಂದ ಕೆಲಸವನ್ನು ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಈ ವೇಳೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ತಾಪಂ ಇಒ ಪುಟ್ಟೇಗೌಡ, ತಾಲೂಕು ಶಿಕ್ಷಣಾಧಿಕಾರಿ ಬಿ.ಎಸ್. ಭಜಂತ್ರಿ, ತಾಲೂಕು ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವನಿತಾ ದೇಶಭಂಡಾರಿ ಹಾಗೂ ವಿವಿಧ ಸಂಘಟನೆಯ ಮುಖ್ಯಸ್ಥರು ಇದ್ದರು.ಕಳೆದ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹೊನ್ನಾವರ ತಾಲೂಕು ಪ್ರಥಮ ಸ್ಥಾನವನ್ನು ಗಳಿಸಿದ್ದು, ಈ ಹಿನ್ನೆಲೆ ತಾಲೂಕಿಗೆ ಹೆಮ್ಮೆಯನ್ನು ತಂದ ಟಾಪ್ 5 ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರ ಶಕ್ಷಣಾಧಿಕಾರಿ ಬಿ.ಎಸ್. ಭಜಂತ್ರಿ ಅವರನ್ನು ಗೌರವಿಸಲಾಯಿತು. ಯುವಜನ ಮತ್ತು ಕ್ರೀಡಾಧಿಕಾರಿ ಸುದೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.