ರೆಡ್‌ ಕ್ರಾಸ್ ಸಂಸ್ಥೆ ಮನೋಧರ್ಮ ಬೆಳೆಸಿಕೊಳ್ಳಿ: ಮೀರಾ ಶಿವಲಿಂಗಯ್ಯ

| Published : Feb 06 2024, 01:35 AM IST

ಸಾರಾಂಶ

ಸರ್ಕಾರ ಎಲ್ಲ ಕಾಲೇಜುಗಳಲ್ಲಿ ಯುವ ರೆಡ್‌ಕ್ರಾಸ್ ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದೆ. ರೆಡ್ ಕ್ರಾಸ್ ಸಂಸ್ಥೆಯ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ವಾತಾವರಣ ಉಂಟು ಮಾಡಿ. ಎಲ್ಲಾ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಬೇಕು, ಸಮಾಜದಲ್ಲಿ ತನ್ನನ್ನು ತಾವು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ ನಿಷ್ಪಕ್ಷಪಾತ ಹಾಗೂ ಸ್ವಯಂ ಪ್ರೇರಿತವಾಗಿರುವ ರೆಡ್‌ಕ್ರಾಸ್ ಸಂಸ್ಥೆಯ ಮನೋಧರ್ಮವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮಂಡ್ಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.

ನಗರದ ಪಿಇಎಸ್ ಕಾನೂನು ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಘಟಕ, ಪಿಇಎಸ್ ಕಾನೂನು ಕಾಲೇಜು ಆಶ್ರಯದಲ್ಲಿ ನಡೆದ ಜಾಗತಿಕ ಏಡ್ಸ್ ದಿನ ಹಾಗೂ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಎಲ್ಲ ಕಾಲೇಜುಗಳಲ್ಲಿ ಯುವ ರೆಡ್‌ಕ್ರಾಸ್ ಘಟಕ ಸ್ಥಾಪಿಸುವಂತೆ ಸೂಚನೆ ನೀಡಿದೆ. ರೆಡ್ ಕ್ರಾಸ್ ಸಂಸ್ಥೆಯ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ವಾತಾವರಣ ಉಂಟು ಮಾಡಿ ಎಂದರು.

ಎಲ್ಲಾ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಬೇಕು, ಸಮಾಜದಲ್ಲಿ ತನ್ನನ್ನು ತಾವು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು. ಯಾವುದೇ ಫಲವನ್ನು ಅಪೇಕ್ಷಿಸದೆ ದಾನ ಮಾಡುವುದೇ ನಿಜವಾದ ದಾನ. ಆದ್ದರಿಂದ ದಯೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ರೆಡ್ ಕ್ರಾಸ್ ಸಂಸ್ಥೆ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಮಾನವೀಯ ಸೇವಾ ಸಂಸ್ಥೆಯಾಗಿದೆ. ಇದನ್ನು ೧೮೬೩ ರಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಸ್ಥಾಪಿಸಲಾಯಿತು. ರೆಡ್‌ಕ್ರಾಸ್ ಚಳವಳಿಯ ಪಿತಾಮಹ ಜೀನ್ ಹೆನ್ರಿ ಡ್ಯುನಾಂಟ್ ಎಂದು ಹೇಳಿದ ಅವರು, ಎರಡು ಬಾರಿ ರೆಡ್ ಕ್ರಾಸ್ ಸಂಸ್ಥೆಗೆ ನೋಬಲ್ ಪ್ರಶಸ್ತಿ ಸಿಕ್ಕಿದೆ ಎಂದರು.

ಪಿಇಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಜೆ.ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಾಗತಿಕ ಏಡ್ಸ್ ದಿನದ ಮಹತ್ವ ಕುರಿತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎನ್.ಸಿ.ವೇಣುಗೋಪಾಲ್ ಹಾಗೂ ಅಂತರರಾಷ್ಟ್ರೀಯ ಸ್ವಯಂ ಸೇವಕರ ದಿನದ ವಿಷಯ ಕುರಿತು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು ಉಪನ್ಯಾಸ ನೀಡಿದರು.

ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಟಿ. ನಾರಾಯಣಸ್ವಾಮಿ, ಎಂ.ಯೋಗೇಶ್, ಪಿಇಎಸ್ ಕಾನೂನು ಕಾಲೇಜು ಪ್ರಾಧ್ಯಾಪಕರಾದ ಯಮುನಾವತಿ, ಜಯಕುಮಾರ್, ಎಂ.ಪಿ.ಪ್ರಮೋದ್‌ಕುಮಾರ್, ಸುಭಾಷ್ ಇತರರು ಭಾಗವಹಿಸಿದ್ದರು.