ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಖ್ಯಾತ ವಿಮರ್ಶಕ ಹಾಗೂ ಸಂಸ್ಕೃತ ಚಿಂತಕ ಡಾ. ಎಚ್.ಎಸ್.ಸತ್ಯನಾರಾಯಣ ಹೇಳಿದರು.ಪಟ್ಟಣದ ಸಮೀಪದಲ್ಲಿನ ಗುರುಕುಲ ಎಜುಕೇಶನ್ ಟ್ರಸ್ಟ್ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ‘ನಲಿವು’ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಕೌಟುಂಬಿಕವಾಗಿ ಸಿಗುವ ತಂದೆ-ತಾಯಿ, ಅಜ್ಜ-ಅಜ್ಜಿ ಪ್ರೀತಿ ಕಾಣೆಯಾಗಿದೆ. ಪೋಷಕರು ತಮ್ಮ ಮಕ್ಕಳ ವ್ಯಾಸಂಗ ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು. ಗುರುಶಿಷ್ಯ ಹಾಗೂ ಪೋಷಕರ ನಡುವಿನ ಅಂತರ ಹೆಚ್ಚಾಗುತ್ತಿದೆ. ಮಕ್ಕಳ ಮೇಲೆ ಶಿಕ್ಷಕರು ಪೋಷಕರು ಬೆದರಿಸುವ ಬದಲು ತಿಳಿಹೇಳಬೇಕು. ಶಾಲೆಗಳಲ್ಲಿ ಪಠ್ಯದ ಜೊತೆಗೆ ಸಂಸ್ಕಾರ ಬಿತ್ತುವ ಕೆಲಸವನ್ನು ಗುರುಕುಲ ಎಜುಕೇಶನ್ ಟ್ರಸ್ಟ್ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಪೋಷಕರು ತಮ್ಮ ಮೇಲೆ ಮಕ್ಕಳ ಜವಾಬ್ದಾರಿ ಇಲ್ಲ ಎನ್ನುವುದನ್ನು ಬಿಟ್ಟು, ಪೋಷಕರು ನಿತ್ಯ ಮೊಬೈಲಿನಲ್ಲಿ ಕಾಲಕಳೆದರೆ ಮಕ್ಕಳ ಗತಿ ಏನಾಗಬೇಕಿದೆ. ಜಾತಿ, ಧರ್ಮ ವಿಷ ಬೀಜವನ್ನು ಬಿತ್ತುವ ಬದಲು ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಬೇಕಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಮುಂದಿನ ದಿನದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಗುರುಕುಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವಿ.ಎಸ್.ಬೋಜೇಗೌಡ, ಕಾರ್ಯದರ್ಶಿ ಎಂ.ಡಿ.ದಿನೇಶ್, ಖಜಾಂಚಿ ಲೋಕೇಶ್, ಟ್ರಸ್ಟ್ ನಿರ್ದೇಶಕರಾದ ಮಹೇಶ್, ಉಮೇಶ್, ಕೆ.ಎಲ್.ಸುರೇಶ್, ವನಜಾಕ್ಷಿ ನಾಗರಾಜು, ಮುಖ್ಯ ಶಿಕ್ಷಕರಾದ ದೀಪ ಮತ್ತು ಅಸ್ಮಾಂ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು. ಸಮಾರಂಭದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪೋಷಕರ ಮೆಚ್ಚುಗೆಗೆ ಪಾತ್ರರಾದರು.