ನಿಸ್ವಾರ್ಥ ಸೇವಾ ಮನೋಭಾವ ರೂಢಿಸಿಕೊಳ್ಳಿ: ಡಾ.ಅಗಸರ್‌

| Published : Feb 08 2024, 01:30 AM IST

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಸ್ಪರ್ಧಾ ಮನೋಭಾವ ಜೊತೆಗೆ ಆತ್ಮಸ್ಥೈರ್ಯ ಬೆಳೆಯುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಸ್ಪರ್ಧಾ ಮನೋಭಾವ ಜೊತೆಗೆ ಆತ್ಮಸ್ಥೈರ್ಯ ಬೆಳೆಯುತ್ತದೆ. ನನಗಾಗಿ ಅಲ್ಲ ನಿಮಗಾಗಿ ಎಂಬ ಸಂಕಲ್ಪದೊಂದಿಗೆ ನಿಸ್ವಾರ್ಥ ಸೇವೆಗೆ ಕಾರ್ಯಪ್ರವೃತ್ತರಾಗಿ ಎಂದು ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.

ಗುವಿವಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯದ ಕನಸನ್ನು ನನಸಾಗಿಸಿಕೊಳ್ಳಲು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ಶಿಬಿರಗಳಲ್ಲಿ ತೊಡಗಿಸಿಕೊಂಡರೆ ಬಹುಮುಖ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರೇರಣೆಯಾಗಲಿದೆ. ಯುವ ಸಮೂಹ ಸಾಧನೆಗೆ ಸ್ಪೂರ್ತಿ ದೊರೆಯಲಿದೆ ಎಂದರು.

ಕರ್ನಾಟಕ ಸೇರಿ ತಮಿಳುನಾಡು, ತೆಲಂಗಾಣ, ಮಹರಾಷ್ಟ್ರ, ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯದ ಪ್ರತಿನಿಧಿಗಳಾಗಿ ಆಗಮಿಸಿರುವ ವಿದ್ಯಾರ್ಥಿಗಳ ವಿಭಿನ್ನ ಸಂಸ್ಕೃತಿ ವಿನಿಮಯ ಜೊತೆಗೆ ಭ್ರಾತೃತ್ವ ಮತ್ತು ಐಕ್ಯತಾ ಮನೋಭಾವನೆ ವೃದ್ಧಿಗೊಳ್ಳಲಿದೆ ಎಂದ ಅವರು, ಈ ಶಿಬಿರದಿಂದ ಉನ್ನತ ಕಲಿಕೆ ಪ್ರೋತ್ಸಾಹದ ಜೊತೆಗೆ ವೈವಿಧ್ಯಮಯ ಕೌಶಲ್ಯ ಜ್ಞಾನ ಸಿಗಲಿದೆ ಎಂದರು.

ಗುವಿವಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾ ವಿಷೇಯಕ ಪರಿಷತ್ತ ಸದಸ್ಯ ಪ್ರೊ.ಎನ್. ಬಿ ನಡುವಿನಮನಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜಕ ಡಾ.ಎನ್.ಜಿ. ಕಣ್ಣೂರು ಮಾತನಾಡಿದರು. ಕುಲಸಚಿವ ಡಾ.ಬಿ.ಶರಣಪ್ಪ ಉಪಸ್ಥಿತರಿದ್ದರು. ವಿವಿ ಗ್ರಂಥಾಲಯದಿಂದ ಕಾರ್ಯಸೌಧದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಎಂಎಸ್‍ಐ ಪದವಿ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ.ಪ್ರಾಣೇಶ್ ಕಾರ್ಯಕ್ರಮ ನಿರ್ವಹಿಸಿದರು. ಗುವಿವಿ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಮೇರಿ ಮೆಥೋಸ್ ಅತಿಥಿ ಪರಿಚಯಿಸಿದರು. ಶಿಬಿರಾರ್ಥಿಗಳು ಎನ್‍ಎಸ್‍ಎಸ್ ಗೀತೆ ಪ್ರಸ್ತುತಪಡಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದರು.

ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ 6 ರಾಜ್ಯಗಳಿಂದ ಸುಮಾರು 140 ಶಿಬಿರಾರ್ಥಿಗಳು ಒಳಗೊಂಡಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ರಾಸೇಯೋ ಅಧಿಕಾರಿಗಳು ಹಾಗೂ ಸ್ವಯಂಸೇವಕರು ಭಾಗವಹಿಸಿದ್ದಾರೆ. 7 ದಿನದ ಶಿಬಿರದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಐಕ್ಯತಾ ಮತ್ತು ರಾಷ್ಟ್ರ ಸೇವಾ ಮನೋಭಾವ ಬೆಳೆಸುವು ನಿಟ್ಟಿನಲ್ಲಿ ವಿಷಯ ಪರಿಣಿತರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಯೋಗ, ಶ್ರಮದಾನ ಕಾರ್ಯಕ್ರಮಗಳ ಜೊತೆಗೆ ವಿವಿಧ ರಾಜ್ಯಗಳ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.