ಸಾರಾಂಶ
ಕನ್ನಡಪ್ರಭವಾರ್ತೆ ತುಮಕೂರು
ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಏಕತೆ ಮತ್ತು ಶಾಂತಿಯುತ ಹೋರಾಟದ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರಲ್ಲಿ ಭಾವೈಕ್ಯತೆ ಮನೋಭಾವ ಬೆಳೆಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಜೊತೆಗೆ ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿಯ ವಿರುದ್ಧ ಹೋರಾಡಿದರು. ವಿಶ್ವದ ಅನೇಕ ರಾಷ್ಟ್ರ ನಾಯಕರು ಸಹ ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು.ಗಾಂಧೀಜಿಯವರ ತತ್ವಾದರ್ಶಗಳಿಂದ ಪ್ರೇರಿತರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ೧೬ ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಜೈ ಜವಾನ್-ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ರಾಷ್ಟ್ರವನ್ನು ಕಟ್ಟುವ ಮೂಲಕ ದೇಶದ ೨ನೇ ಪ್ರಧಾನಿಯಾದರು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ರಾಜ್ಯಖಾತೆ ಸಚಿವರಾದ ವಿ.ಸೋಮಣ್ಣ ಮಾತನಾಡಿ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಜಾರಿಗೊಳಿಸಿ ಇಂದಿಗೆ ೧೦ ವರ್ಷ ತುಂಬಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆರೋಗ್ಯಕರ ಜೀವನಕ್ಕಾಗಿ ದೇಶದಲ್ಲಿ ೧೦.೧೫ ಕೋಟಿ ಮನೆಗಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ೫,೫೪,೧೭೬ ಗ್ರಾಮಗಳನ್ನು ಬಯಲು ಶೌಚ ಮುಕ್ತ ಗ್ರಾಮ ಗಳಾಗಿ ಘೋಷಿಸಲ್ಪಟ್ಟಿವೆ. ತುಮಕೂರು ಜಿಲ್ಲೆಯಲ್ಲಿ ಈವರೆಗೆ ೪,೫೫,೦೭೬ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.ಸ್ವತಂತ್ರ ಭಾರತದ ೭೫ ವಷಗಳ ನಂತರವೂ ರಾಷ್ಟ್ರದ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವವಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಪ್ರತಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಸುಮಾರು ೭೯.೨೫ ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ೩೫,೬೩,೯೬ ನಳ ಸಂಪರ್ಕ ನೀಡಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ/ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ, ಖಾಯಮಾತಿ ಹೊಂದಿದ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ, ಪ್ರತಿಭಾವಂತ ಪೌರಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸೇವೆಯಿಂದ ನಿವೃತ್ತಿ ಹೊಂದಿದ ಪೌರ ಕಾರ್ಮಿಕರಿಗೆ ಸನ್ಮಾನ, ಉತ್ತಮ ಪೌರ ಕಾರ್ಮಿಕ ಪ್ರಶಸ್ತಿ ಸೇರಿದಂತೆ ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಈ ಸಂಧರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಕೆ.ವಿ.ಅಶೋಕ್ ಸೇರಿದಂತೆ ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತಿತರರಿದ್ದರು.