ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಇಂದು ಮಕ್ಕಳಿಗೆ ಐಷಾರಾಮಿ ಜೀವನ ತೋರಿಸಿ ಅವರಿಗೆ ಕಷ್ಟದ ಜೀವನವನ್ನು ಎದುರಿಸುವ ಆತ್ಮಸ್ಥೈರ್ಯ ಕಳೆದುಕೊಳ್ಳುವಂತೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ತಾಯಂದಿರರು ತಮ್ಮ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಆಚಾರ- ವಿಚಾರ ಬಗ್ಗೆ ಶರಣರ ಆದರ್ಶ ಜೀವನ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುವುದು ಅಗತ್ಯವಾಗಿದೆ ಎಂದು ಪ್ರವಚನಕಾರ ಐ.ಬಿ.ಹಿರೇಮಠ ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಶ್ರೀಬನ್ನಿ ಮಹಾಕಾಳಿ ಮಹಾಮಂಡಳದಿಂದ ದಸರಾ ನವರಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ದೇವಿ ಪುರಾಣದಲ್ಲಿ ಹೇಳಿದರು. ಸಂಸ್ಕಾರಕ್ಕೂ ಮನಶಾಂತಿಗೂ ಅವಿನಾಭಾವ ಸಂಬಂಧವಿದೆ. ಸಂಸ್ಕಾರವಿದ್ದಾಗ ಮನಶಾಂತಿ ಇರುತ್ತದೆ, ಮನಶಾಂತಿ ಇದ್ದಾಗ ಸಂಸ್ಕಾರ ಬೆಳೆಯುತ್ತದೆ. ಜೀವನದ ಹಾದಿಯನ್ನೇ ತಪ್ಪಿಸುವ ಪರಮವೈರಿಗಳು ಮನುಷ್ಯನೊಳಗೇ ಜೀವಂತವಾಗಿ ಇರುವಾಗ ಇವು ಜೀವಂತವಾಗಿರುವ ತನಕವೂ ಧರ್ಮದ ಉನ್ನತಿ ಸಾಧ್ಯವಿಲ್ಲ. ಧರ್ಮಗಳು ಪ್ರತಿಯೊಬ್ಬರಿಗೂ ಜೀವನಪ್ರೀತಿಯನ್ನು ಕಲಿಸುವ ಪಾಠಶಾಲೆಗಳು. ನಮ್ಮನ್ನಾಳುವ ವೈರಿಗಳು ದೇವಲೋಕದಿಂದಲೋ, ಪಾತಾಳದಿಂದಲೋ ಬಂದವುಗಳಲ್ಲ. ಅವು ನಮ್ಮೊಳಗೇ ಇದ್ದುಕೊಂಡು ನಮ್ಮನ್ನು ನಿಯಂತ್ರಿಸುವ ಭಾವಗಳಾಗಿವೆ. ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮಾತ್ಸರ್ಯ. ಈ ಆರು ವೈರಿಗಳೇ ನಮ್ಮ ಪರಮವೈರಿಗಳು. ಇವನ್ನು ಅರಿಷಡ್ವರ್ಗಗಳು ಎಂದೇ ಗುರುತಿಸಲಾಗಿದೆ. ಮನಸ್ಸಿನ ಶಾಂತಿಯನ್ನು ಕೆಡಿಸುವ ಮನಸ್ಸಿನ ಭಾವನೆಗಳನ್ನೇ ಬದಲಿಸುವ ಈ ಗುಣಗಳ ನಿಜವಾದ ಮಾನವೀಯ ಮೌಲ್ಯಗಳನ್ನೇ ಕೊಂದು ಬಿಡುತ್ತವೆ ಎಂದರು.
ಕಾಮಾಸಕ್ತಿಯುಳ್ಳವನಿಗೆ ವೇದಗಳು ಅರ್ಥವಾಗುವುದಿಲ್ಲ. ಅಂದರೆ, ಹಿತನುಡಿಯೋ, ನೈತಿಕತೆಯೋ ಅವನಿಗೆ ಅರಿವಾಗುವುದೇ ಇಲ್ಲ. ಯಾವುದೇ ಹೀನ ಕಾರ್ಯಕ್ಕೂ ಹೇಸದ, ಲಜ್ಜೆ, ಅಂದರೆ ಮರ್ಯಾದೆಯ ಛಾಯೆಯೂ ಇಲ್ಲದವನಾಗಿರುತ್ತಾನೆ. ಇದರಿಂದ ಅಧರ್ಮದ ಕಾರ್ಯಗಳು ಯಥೇಚ್ಛವಾಗಿ ನಡೆಯುತ್ತವೆ. ಇಡೀ ಪ್ರಪಂಚವನ್ನು ನಾಶ ಮಾಡುವ ಶಕ್ತಿ ಈ ಕೋಪ ಅಥವಾ ಕ್ರೋಧಕ್ಕಿದೆ. ಕ್ರೋಧಕ್ಕೊಳಗಾದವನು ಯಾವ ನೀತಿಯ ಮಾತಿಗೂ ಮಣಿಯಲಾರ ಎಂದು ವಿವರಿಸಿದರು.ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಮಾತಿದೆ. ಮದವು ಸ್ವಾರ್ಥವನ್ನು ಹುಟ್ಟಿಸುವುದರ ಜೊತೆಗೆ ಸಮಾಜದ ಶಾಂತಿಯನ್ನು ಕೆಡಿಸುತ್ತದೆ. ಮೋಹವು ಮನುಷ್ಯನನ್ನು ಕುರುಡರನ್ನಾಗಿಸುತ್ತದೆ. ಮೋಹದಿಂದಾಗಿ ಸರಿತಪ್ಪುಗಳು ತಿಳಿಯುವುದೇ ಇಲ್ಲ. ಮೋಹಕ್ಕೆ ಒಳಗಾದವನು ಅದೇ ಗುಂಗಿನಲ್ಲಿರುತ್ತಾನೆ. ಹೊರ ಜಗತ್ತಿಗೆ ಬಾಧಕವಾಗುವ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಲೋಭವು ಗಳಿಸಿದ ಕೀರ್ತಿಯನ್ನೂ ಉಳಿಸುವುದಿಲ್ಲ, ಧರ್ಮವನ್ನೂ ಉಳಿಸುವುದಿಲ್ಲ. ಮತ್ಸರ ನಮ್ಮನ್ನೇ ಸುಡುವ ಬೆಂಕಿಯಿದ್ದಂತೆ. ಪ್ರತಿ ಮನುಷ್ಯನಲ್ಲಿ ಅವನದೇ ಆದ ಶಕ್ತಿಗಳಿರುತ್ತವೆ. ಅವನ್ನರಿತು ತೊಡಗಿಸಿಕೊಳ್ಳಬೇಕೆ ಹೊರತು ಬೇರೆಯವರನ್ನು ನೋಡಿ ಕರಗುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಜೀವನದ ದೃಷ್ಟಾಂತವನ್ನು ವಿವರಿಸಿದರು.
ಈ ವೇಳೆ ವಿದ್ವಾನ್ ಗವಾಯಿ ಚಂದ್ರಶೇಖರ ಬಸಣ್ಣ ಪತ್ತಾರ ಅವರು ಪುರಾಣದ ಮಧ್ಯದಲ್ಲಿ ಅರ್ಥಪೂರ್ಣವಾದ ಹಿತ ವಚನಗಳನ್ನು ಸಂಗೀತದ ಮೂಲಕ ಭಕ್ತಿ ಮೆರೆದರು. ರಾಮಚಂದ್ರ ಗಜೇಂದ್ರಗಡ ತಬಲಾ ಸಾಥ್ ನೀಡಿದರು. ನೂರಾರು ಮಹಿಳೆಯರು, ಮಕ್ಕಳು, ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು.