ಸಾರಾಂಶ
ವಿದ್ಯಾರ್ಥಿಗಳು ಗಟ್ಟಿಯಾಗಿ ಓದುವುದನ್ನೇ ಮರೆತಿದ್ದಾರೆ. ಓದುವ ಹವ್ಯಾಸ ದೂರವಾದ್ದರಿಂದ ಮಕ್ಕಳಲ್ಲಿ ನಾವು ನಿರೀಕ್ಷಿಸಿದಷ್ಟು ಗುಣಮಟ್ಟದ ಶಿಕ್ಷಣ ಕಾಣಲು ಸಾಧ್ಯವಾಗುತ್ತಿಲ್ಲ
ಕನ್ನಡಪ್ರಭ ವಾರ್ತೆ ಕೊರಟಗೆರೆ
ವಿದ್ಯಾರ್ಥಿಗಳು ಗಟ್ಟಿಯಾಗಿ ಓದುವುದನ್ನೇ ಮರೆತಿದ್ದಾರೆ. ಓದುವ ಹವ್ಯಾಸ ದೂರವಾದ್ದರಿಂದ ಮಕ್ಕಳಲ್ಲಿ ನಾವು ನಿರೀಕ್ಷಿಸಿದಷ್ಟು ಗುಣಮಟ್ಟದ ಶಿಕ್ಷಣ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಶಿಕ್ಷಕ ಹೊಸಕರೆ ರಿಜ್ವಾನ್ ಬಾಷ ಹೇಳಿದರು.ತಾಲೂಕಿನ ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಗಟ್ಟಿಯಾಗಿ ಓದು ತಪ್ಪೇನಿಲ್ಲ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆಯಲ್ಲಿ ಪೋಷಕರೆದುರು ಮಕ್ಕಳು ಪುಸ್ತಕ ಹಿಡಿದು ಗಟ್ಟಿಯಾಗಿ ಓದುವುದು ಕಡಿಮೆಯಾಗುತ್ತಿದೆ. ಮಕ್ಕಳೆದುರಿಗೆ ಕುಳಿತು ಅವರ ಓದುವಿಕೆಯನ್ನು ಆಸ್ವಾಧಿಸ ಪೋಷಕರು ಮುಂದಾಗುತ್ತಿಲ್ಲ ಎಂದರು.
ಹಾಗಾಗಿ ಶಾಲೆಯಲ್ಲಿ ಪ್ರಾರ್ಥನಾ ಸಭೆಗೂ ಮುನ್ನ 10 ನಿಮಿಷ ಎಲ್ಲ ಮಕ್ಕಳು ಶಾಲಾ ಆವರಣದ ತುಂಬಾ ದೂರ ದೂರದಲ್ಲಿ ಕುಳಿತು ಅಥವಾ ನಿಂತು ಪುಸ್ತಕ ಹಿಡಿದು ಓದಿದರೆ ಮಕ್ಕಳು ಬಾಯ್ದೆರೆ ಓದನ್ನು ಮುಂದುವರೆಸುತ್ತಾರೆಂಬ ವಿಶ್ವಾಸದಿಂದ ಈ ಅಭಿಯಾನ ಪ್ರಾರಂಭಿಸಿದ್ದೇವೆ. ಶಾಲಾ ಅವಧಿಯಲ್ಲಿ ಬಿಡುವಿದ್ದಾಗ ಶಿಕ್ಷಕರು ಮಕ್ಕಳೆದುರು ಇದ್ದು ಈ ಕಾರ್ಯವನ್ನು ಮಾಡಲು ಸೂಚಿಸಲಾಗಿದೆ. ಇದೇನೂ ಹೊಸ ಇಲ್ಲದಿದ್ದರೂ ಮರೆತಿರುವುದನ್ನು ನೆನಪಿಸಿ ಎಚ್ಚರಿಸುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದು ಹೇಳಿದರು.ಬಾಯ್ದೆರೆ ಓದಿನಿಂದ ಉಚ್ಚಾರಣಾ ದೋಷ ನಿವಾರಣೆಯಾಗುತ್ತದೆ. ಧ್ವನ್ಯಂತ್ರಗಳು ಸರಿಹೋಗುತ್ತವೆ. ನಿರರ್ಗಳ ಓದುವಿಕೆ ಮತ್ತು ಸ್ಪಷ್ಟ ಮಾತುಗಾರಿಕೆಯಿಂದ ಭಾವನೆಗಳ ಅಭಿವ್ಯಕ್ತಿ ಸುಲಲಿತವಾಗಿ ನಡೆಯುತ್ತದೆ. ಸಂವಹನ ಕೌಶಲ್ಯ ವೃದ್ಧಿಸುತ್ತದೆ. ವ್ಯಾವಹಾರಿಕ ಜ್ಞಾನ ಬೆಳೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕಲಿತ ಪಠ್ಯಾಂಶಗಳು ಮನನ ಆಗುತ್ತವೆ. ಗ್ರಹಿಕೆ ಸುಲಭವಾಗಿ ಪರೀಕ್ಷೆಯಲ್ಲಿ ಉತ್ತರಗಳನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲ ಮಕ್ಕಳು ಗಟ್ಟಿಯಾಗಿ ಓದುವ ಹವ್ಯಾಸವನ್ನು ಇನ್ನಾದರೂ ಮುಂದುವರೆಸಬೇಕೆಂದರು.
ಶಿಕ್ಷಕರಾದ ಅಶ್ವತ್ಥನಾರಾಯಣ, ಚಿಕ್ಕಪ್ಪಯ್ಯ, ಅಶೋಕ್ ಪೂಜಾರ್, ರಾಜಶೇಖರಯ್ಯ ಟಿ.. ಕೃಷ್ಣಪ್ಪ ಎಲ್. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.