ಸಾರಾಂಶ
ಮೊಬೈಲ್ ಬಿಟ್ಟು ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ಹೆಚ್ಚುತ್ತದೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಗಾಯಕ ಸಿಎಂ ನರಸಿಂಹ ಮೂರ್ತಿ ಹೇಳಿದರು.
ನರಸಿಂಹಮೂರ್ತಿ ಅಭಿಮತ । ಪಾಠದ ಜೊತೆ ಆಟವಿದ್ದರೆ ಆರೋಗ್ಯ ವೃದ್ಧಿ
ಕನ್ನಡಪ್ರಭ ವಾರ್ತೆ ಚಾಮರಾಜನಗರಮೊಬೈಲ್ ಬಿಟ್ಟು ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ಹೆಚ್ಚುತ್ತದೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಗಾಯಕ ಸಿಎಂ ನರಸಿಂಹ ಮೂರ್ತಿ ಹೇಳಿದರು.ನಗರದ ಬಂಜಾರ ಇಂಡಿಯನ್ ಸ್ಕೂಲ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿ ಸಮಿತಿ ರಚನೆ ಮತ್ತು ಶಾಲಾ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಆಟದ ಜೊತೆ ಪಾಠ, ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಪೋಷಕರು ಪುಸ್ತಕ ಓದುತ್ತಿದ್ದರೆ ಮಕ್ಕಳಲ್ಲಿ ಓದುವ ಆಸಕ್ತಿ ಮೂಡುತ್ತದೆ ಆದ್ದರಿಂದ ಮಕ್ಕಳಿಗೆ ಏನನ್ನಾದರೂ ಕಲಿಸಲು ಬಯಸಿದರೆ ಮೊದಲನೇಯದಾಗಿ ಪೋಷಕರು ಶುರು ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಸಶಸ್ತ್ರ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್ ರಂಗಸ್ವಾಮಿ ಮಾತನಾಡಿ, ಮಾನವನ ಬದುಕಿಗೆ ಪುಸ್ತಕಗಳು ಸಾಕಷ್ಟು ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವೆಂದರೆ ಆಟ-ಪಾಠ ಮನೋರಂಜನೆ ನೆನಪಾಗುತ್ತದೆ. ಪಾಠದ ಜೊತೆಗೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ ಎಂದು ಹೇಳಿದರು.ಬಂಜಾರ ಇಂಡಿಯನ್ ಸ್ಕೂಲ್ ಮುಖ್ಯಸ್ಥೆ ಪದ್ಮಾವತಿ ಬಾಯಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಶಿಕ್ಷಕ ಎಂ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳು ಕನ್ನಡ ಶಿಕ್ಷಕ ಹಾಗೂ ಗಾಯಕರಾದ ಜೆಬಿ ಮಹೇಶ್ ಅವರ ಸಂಗೀತ ನಿರ್ದೇಶನದಲ್ಲಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಶಿಕ್ಷಕರಾದ ದೀಪ, ಎ.ಜೆ ಸಿದ್ದರಾಜು, ಸುನಂದಾ ಮೊದಲಾದವರು ಹಾಜರಿದ್ದರು.