ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆಧುನಿಕತೆಯ ಆಕರ್ಷಣೆಗಳು ಕ್ಷಣಿಕವಾಗಿದ್ದು, ಅದರಿಂದ ಹೊರಬಂದು ಇತಿಹಾಸ ಸೃಷ್ಟಿಸುವ ಆದರ್ಶ ಗುಣಗಳನ್ನು ಯುವ ಸಮೂಹ ರೂಡಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಸಲಹೆ ನೀಡಿದರು.ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಎನ್.ಸಿ.ಪಿ ಕಲಾ ಸಂಗಮ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾತ್ಮಕತೆ ಬದುಕಿಗೆ ಅತ್ಯವಶ್ಯಕ. ರಂಗೋಲಿ, ಕಸೂತಿ, ಅಡಿಗೆ, ಸಿಂಗಾರ, ಮನೆಯನ್ನು ಒಪ್ಪ ಮಾಡುವ ಬಗೆ, ಇವೆಲ್ಲವೂ ಒಂದು ಕಲೆ. ಕಲಾತ್ಮಕ ಬದುಕು ಸಂಪನ್ನಗೊಳ್ಳಲು ಅಧ್ಯಯನದ ಬಗೆಗೆ ಆಸಕ್ತಿ ಹಾಗೂ ಎಲ್ಲಾ ರಂಗದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿ. ಬದುಕು ಒಂದು ಕಲೆ. ಸಂವಹನ ಒಂದು ಕಲೆ. ಕಲೆ ಸರಿಯಾದ ದಿಕ್ಕಿನಲ್ಲಿ ಆಗದೆ ಇದ್ದರೆ ಬದುಕಿಗೆ ಕಲೆಯಾಗಿ ಉಳಿದುಬಿಡುತ್ತದೆ ಎಂದರು.ಸಾಹಿತಿಗಳು, ಕಲಾವಿದರು, ರಾಜರು ಎಲ್ಲರು ತಮ್ಮದೆ ವಿದ್ವತ್ ಮೂಲಕ ಸಾಂಸ್ಕೃತಿಕವಾಗಿ ಗಟ್ಟಿಯಾದ ಶಕ್ತಿಯನ್ನು ನಾಡಿಗೆ ನೀಡಿದ್ದಾರೆ. ಅಂತಹ ಸಾಂಸ್ಕೃತಿಕ ಹಿನ್ನಲೆಯನ್ನು ಸದಾ ನೆನಸಿಕೊಳ್ಳಬೇಕು. ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳುವಲ್ಲಿ ಕ್ರಿಯಾಶೀಲತೆ ಕಾಪಾಡಲಿದೆ. ಹಿರಿತನಕ್ಕೆ ಗೌರವ ನೀಡುವ ಕಲೆ ನಿಮ್ಮದಾಗಲಿ. ಶಿಕ್ಷಣ ಮತ್ತು ಆರೋಗ್ಯ ಜನ ಸಾಮಾನ್ಯರ ಕೈಗೆ ಸಿಗದೆ ದುಬಾರಿಯಾಗುತ್ತದೆ. ಅದರೆ ಎನ್‌ಇಎಸ್ ಸಂಸ್ಥೆ ಇಂದಿಗೂ ಕೈಗೆಟುಕುವ ಬೆಲೆಯಲ್ಲಿ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ಒಳ್ಳೆಯ ಸ್ನೇಹಿತ ಬದುಕಿನ ಔಷಧ. ಕನಸು ಮತ್ತು ಗುರಿಗೆ ಒಂದೇ ವ್ಯತ್ಯಾಸ, ಕನಸು ಕಾಣಲು ನಿದ್ರೆ ಬೇಕು, ಆದರೆ ಗುರಿ ತಲುಪಲು ನಿದ್ದೆಯಿಲ್ಲದೆ ದುಡಿಯಬೇಕು. ಯಾವಾಗ ಒಂದು ಭಾಷೆ ಸೋಲುತ್ತದೆ, ಅಲ್ಲಿ ನಮ್ಮ ಸಂಸ್ಕೃತಿಯು ಸೋಲಾಗಿ ಬಿಡುತ್ತದೆ. ನಮ್ಮ ಮಾತೃಭಾಷೆಯ ಅಭಿವೃದ್ಧಿಗೆ ಸದಾ ಕಟಿ ಬದ್ಧರಾಗೋಣ ಎಂದರು.ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ಸಿಗುವ ಸಾಂಸ್ಕೃತಿಕ ವಾತಾವರಣವು ಬದುಕಿನ ಉನ್ನತಿಗೆ ಸಹಕರಿಸುವ ಕೌಶಲ್ಯತೆಗಳನ್ನು ರೂಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ರಿಯಾಶೀಲತೆಯು ಮನಸ್ಸಿನ ಆರೋಗ್ಯವನ್ನು ಕಾಪಾಡುವಲ್ಲಿ ಒಂದು ಬಗೆಯ ದಿವ್ಯ ಔಷಧಿ ಎಂಬ ಸತ್ಯವನ್ನು ಫಾರ್ಮಸಿ ವಿದ್ಯಾರ್ಥಿಗಳು ಅರಿಯಬೇಕಿದೆ. ಸಮಾಜದಲ್ಲಿ ಸಾಹಿತ್ಯ ಸಾಂಸ್ಕೃತಿಕ ವಾತಾವರಣವನ್ನು ಬಿತ್ತುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಕ್ತರಾಗೋಣ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾವಿದ ಪೃಥ್ವಿ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.