ಕನ್ನಡ ಭಾಷಾ ಪ್ರೇಮ ಎಲ್ಲರೂ ಬೆಳೆಸಿಕೊಳ್ಳಿ: ಬಸವಲಿಂಗ ಶ್ರೀ

| Published : Nov 11 2024, 12:52 AM IST / Updated: Nov 11 2024, 12:53 AM IST

ಸಾರಾಂಶ

ಮನುಷ್ಯ ಅಧ್ಯಾತ್ಮದೊಂದಿಗೆ ವ್ಯಕ್ತಿತ್ವ ಹೊಂದಬೇಕು.

ಹೊಸಪೇಟೆ: ಕನ್ನಡ ಭಾಷೆ, ಸಾಹಿತ್ಯಾಭಿಮಾನ ಬೆಳೆಸಿಕೊಳ್ಳಬೇಕು. ಪ್ರೀತಿಯೊಬ್ಬರು ನಮ್ಮ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಅನ್ಯಭಾಷೆಗೂ ಗೌರವ ನೀಡಬೇಕು. ನಾವೆಲ್ಲರೂ ಕನ್ನಡ ಭಾಷೆ, ಸಾಹಿತ್ಯವನ್ನು ಬೆಳೆಸಬೇಕು ಎಂದು ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜ.ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ನಗರದ ಬಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ ಹೊಸಪೇಟೆ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸ ಇದೆ. ಈ ಭಾಷೆಯ ಬಗ್ಗೆ ನಾವು ಅಭಿಮಾನ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕೂಡ ಎಲ್ಲರನ್ನೂ ಪ್ರೀತಿಸುವಂತಾಗಬೇಕು ಎಂದರು.

ಮನುಷ್ಯ ಅಧ್ಯಾತ್ಮದೊಂದಿಗೆ ವ್ಯಕ್ತಿತ್ವ ಹೊಂದಬೇಕು. ರಾಜ್ಯದಲ್ಲಿ ಮಠಮಾನ್ಯಗಳು ಕೂಡ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಪೋಷಿಸಿವೆ. ಹೊಸಪೇಟೆ ಕಸಾಪದಿಂದ ಕೈಗೊಳ್ಳುವ ಕನ್ನಡ ಕಾರ್ಯಗಳಿಗೆ ಶ್ರೀಮಠ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕನ್ನಡ ವಿವಿ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ, ಜಿಲ್ಲಾ ಆರ್‌ಸಿಎಚ್‌ಒ ಡಾ. ಬಿ. ಜಂಬಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ ಶಂಕ್ರಿ, ಮುಖಂಡರಾದ ಶರಣುಸ್ವಾಮಿ, ಸಾಲಿಸಿದ್ದಯ್ಯ ಸ್ವಾಮಿ, ಗುಜ್ಜಲ ಗಣೇಶ, ಕಸಾಪ ತಾಲೂಕು ಅಧ್ಯಕ್ಷ ಗುಂಡಿ ಮಾರುತಿ, ನಿಕಟಪೂರ್ವ ಅಧ್ಯಕ್ಷ ಡಾ. ನಾಯಕರ ಹುಲುಗಪ್ಪ ಮತ್ತಿತರರಿದ್ದರು.