ಅಜ್ಜಂಪುರ ತಾಲೂಕಿನ ಕಾಟಿನಗೆರೆಯಲ್ಲಿ ಹಮ್ಮಿಕೊಳ್ಳಲಾದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಅಜ್ಜಂಪುರ

ಕನ್ನಡ ನಾಡು, ನುಡಿಯ ಮೇಲೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು, ಕರ್ನಾಟಕ ಹೆಸರಾಯಿತು ಆದರೆ, ಉಸಿರಾಗಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು. ತಾಲೂಕಿನ ಕಾಟಿನಗೆರೆ ಗ್ರಾಮದಲ್ಲಿ ಭಾನುವಾರ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕನ್ನಡ ಭಾಷೆ ಸೊರಗುತ್ತಿರುವುದು ನೋವಿನ ಸಂಗತಿ. ಕರ್ನಾಟಕ ಗಡಿಭಾಗದಲ್ಲಿ ಕನ್ನಡ ಶಾಲೆಗಳು ಕ್ಷೀಣಿಸುತ್ತಿದ್ದು, ಅವುಗಳನ್ನು ತ್ವರಿತವಾಗಿ ಪುನಶ್ಚೇತನಗೊಳಿಸಬೇಕಿದೆ ಎಂದರು.

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಾಗಲು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಸಂಘಟನೆಗಳು ಪ್ರಯತ್ನಿಸಬೇಕೆಂದರು.

ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಎಸಿ ಚಂದ್ರಪ್ಪ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಸ್ವಾಭಿಮಾನದ ಸಂಕೇತ. ಕನ್ನಡ ಭಾಷೆ ನಮ್ಮ ಉಸಿರಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಶ್ರೀಮಂತವಾಗಿದ್ದು, ಸಮ್ಮೇಳನಗಳ ಮೂಲಕ ಮಕ್ಕಳಲ್ಲಿ ಭಾಷಾ ಪ್ರೇಮ ಹೆಚ್ಚಿಸುವುದರ ಜೊತೆಗೆ ಮನೆ ಎಂಬ ಪ್ರಾಥಮಿಕ ಶಾಲೆಯಲ್ಲಿ ಕನ್ನಡದ ಜೀವಂತಿಕೆ ಉಳಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಮ್ಮೇಳನದಲ್ಲಿ ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಕುರಿತಾದ ಎರಡು ಪ್ರಮುಖ ಘೋಷ್ಠಿ ನಡೆದವು. ಯಡಿಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಬೀರೂರು, ರಂಭಾಪುರಿ ಶಾಖ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಎಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮಯ್ಯ ಸಾನಿಧ್ಯವಹಿಸಿದ್ದರು.

ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾಕ್ಟರ್ ಸಂತೋಷ್ ಹಾನಗಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ್. ಜಿ.ಉಮಾಪತಿ, ಆರಾಧ್ಯ, ಡಿ ಮಲ್ಲಿಕಾರ್ಜುನ್, ಎಂ.ಒ.ಮಮತೇಶ್, ಕೆ.ಸಿ.ಶಿವಮೂರ್ತಿ, ಎಚ್. ಎಂ. ಲೋಕೇಶ್, ಶಿವಮೂರ್ತಿ, ಇಮ್ರಾನ್ ಅಹಮದ್, ಎಸಿ ಚಂದ್ರಪ್ಪ, ಎಸ್ ಸಿದ್ದರಾಮಯ್ಯ, ಸಿದ್ದಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಸಿರಿ ಪ್ರಶಸ್ತಿ ಪ್ರದಾನ

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರಾದ ದ್ಮಾವತಮ್ಮ ಚಿಕ್ಕನವಂಗಲ, ಶಂಕರಪ್ಪ ಭಕ್ತನಕಟ್ಟೆ, ಲೋಕೇಶ್ ಸೊಲ್ಲಾಪುರ, ಜಯಣ್ಣ ಪಾಟೀಲ್, ಜೋಗೇ ಗೌಡ, ಎಂ ರಂಗಪ್ಪ, ಗಂಗಾಧರ ಶಾಸ್ತ್ರಿ, ಸಣ್ಣ ಪರಪ್ಪ, ಸತೀಶ್ ಆಚಾರ್ ಕಾಟಿಗನೇರೆ, ಸಿ.ಶಿವಪ್ರಸಾದ್ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮ್ಮೇಳನದ ನಿರ್ಣಯಗಳು

*ಸರ್ಕಾರ ಭದ್ರಾ ನೀರನ್ನು ಅಜ್ಜಂಪುರ ತಾಲೂಕಿನ ಎಲ್ಲಾ ಕೆರೆಗಳಿಗೆ ತುಂಬಿಸಬೇಕು.

*ಅಜ್ಜಂಪುರ ಕಲಾ ಸೇವಾ ಸಂಘವನ್ನು ಪುನಶ್ಚೇತನ ಗೊಳಿಸಿ ಹೊಸ ರಂಗಮಂದಿರ ನಿರ್ಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು.

*ಅಜ್ಜಂಪುರ ತಾಲೂಕು ಘೋಷಣೆಯಾಗಿ 6 ವರ್ಷಗಳಾದರೂ ಪರಿಪೂರ್ಣವಾಗಿ ಸರ್ಕಾರ ಕಚೇರಿಗಳನ್ನುಆರಂಭಿಸಿಲ್ಲ. ತ್ವರಿತವಾಗಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಬೇಕು.