ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ

| Published : Dec 05 2024, 12:31 AM IST

ಸಾರಾಂಶ

ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದು ಮಾದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮಂಗಳನಂದನಾಥನಂದಜೀ ಮಹಾರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದು ಮಾದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮಂಗಳನಂದನಾಥನಂದಜೀ ಮಹಾರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲೂಕಿನ ಮಾದಿಹಳ್ಳಿಯ ರಾಮಕೃಷ್ಣ ಮಠ ವಿದ್ಯಾ ಶಾಲೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಇನ್ಫೋಸಿಸ್ ಎಂಬುದು ದಾನಕ್ಕೆ ಹೆಸರಾಗಿದೆ. ರಾಷ್ಟ್ರ ವ್ಯಾಪ್ತಿಯಲ್ಲಿ ಹಲವಾರು ಕ್ಷೇತ್ರಗಳಿಗೆ ಸಮಾಜ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯಲಿ ಎಂದು ಆಶಿಸಿದರು. ಮಕ್ಕಳೂ ಸಹ ಇಂತಹ ಸಂಸ್ಥೆಗಳ ಸಹಾಯವನ್ನು ಪಡೆದು ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಮುಂದಿನ ದಿನಗಳಲ್ಲಿ ತಾವು ಸಹ ಸಹಾಯದ ಮನೋಭಾವವನ್ನು ಬೆಳೆಸಿಕೊಂಡು ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಇಂತಹ ಧರ್ಮಾರ್ಥ ಸಂಸ್ಥೆಗಳ ಆದರ್ಶವನ್ನು ಪಾಲಿಸಬೇಕೆಂದರು. ತಾಲೂಕಿನ ಗ್ರೇಡ್ ೨ ತಹಸೀಲ್ದಾರ್ ಸುಮತಿ ಮತ್ತು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸಿದ್ದಪ್ಪ ವಾಲೀಕಾರ್ ರವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ಗಳನ್ನು ವಿತರಿಸಿ, ಮಕ್ಕಳ ಸುರಕ್ಷತೆ, ಸಮಯ ಪ್ರಜ್ಞೆ, ಮುಂದಿನ ಶಿಕ್ಷಣ ಭವಿಷ್ಯ ಕುರಿತು ಹಲವಾರು ಉಪಯುಕ್ತ ಮಾಹಿತಿಗಳ ಸಲಹೆ ನೀಡಿದರು. ತಾಲೂಕು ಪತ್ರಕರ್ತರ ಸಂಘದ ಖಜಾಂಚಿ ಸಚಿನ್ ಮಾಯಸಂದ್ರ ಮಾತನಾಡಿ, ಮಠದಲ್ಲಿ ಸುಂದರ ಪರಿಸರವಿದೆ. ಮಕ್ಕಳ ಬಗ್ಗೆ ಕಾಳಜಿ ಇದೆ. ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಲಭಿಸುತ್ತಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಿರುವ ರಾಮಕೃಷ್ಣ ಮಠದ ಆಡಳಿತಕ್ಕೆ ಹಾಗೂ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ೨೦೨೪- ೨೫ ನೇ ಸಾಲಿನ ಸುಮಾರು ೬೦ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸ್ವಾಮಿ ಉತ್ತಾರಣಾನಂದಾಜೀ ಮಹಾರಾಜ್ ಹಾಗೂ ಶಾಲಾ ಆಡಳಿತ ಮಂಡಳಿ ಸಹಶಿಕ್ಷಕ ವರ್ಗ ಸಿಬ್ಬಂದಿಗಳು ತಾಲೂಕು ಕಚೇರಿಯ ಶಿರಸ್ತೇದಾರ್ ಅಂಬುಜಾಕ್ಷಿ. ಸಿಬ್ಬಂದಿಗಳಾದ ವತ್ಸಲ, ಹರಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಎಂ.ಎಸ್.ರವಿ ಸ್ವಾಗತಿಸಿದರು. ಶಿಕ್ಷಕರಾದ ಟಿ.ಎಂ.ಮೇಘ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.