ಉದ್ಯಮಿಯಾಗಿ ಇತರರಿಗೆ ಉದ್ಯೋಗ ನೀಡುವ ಮನೋಭಾವ ಬೆಳೆಸಿಕೊಳ್ಳಿ: ಮುರುಗೇಶ ನಿರಾಣಿ

| Published : Oct 27 2025, 12:15 AM IST

ಉದ್ಯಮಿಯಾಗಿ ಇತರರಿಗೆ ಉದ್ಯೋಗ ನೀಡುವ ಮನೋಭಾವ ಬೆಳೆಸಿಕೊಳ್ಳಿ: ಮುರುಗೇಶ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕೈಗಾರಿಕೋದ್ಯಮಿ ರಾಜಕಾರಣಿ, ಟ್ರೇಡರ್ ಆಗಲು ಗಾಡ್‌ಫಾದ‌ರ್ ಬೇಕಾಗಿಲ್ಲ. ನಮ್ಮಲ್ಲಿನ ಯೋಚನೆಗಳು ಬದಲಾಗಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಕೈಗಾರಿಕೋದ್ಯಮ ಆರಂಭಕ್ಕೆ ಬಹಳಷ್ಟು ಅವಕಾಶವಿವೆ. ಇಂದಿನ ಯುವಕರು ಉದ್ಯೋಗ ಅರಸಿ ಬೇರೆಡೆ ಹೋಗದೆ, ಉದ್ಯಮಿಯಾಗಿ ಇತರರಿಗೆ ಉದ್ಯೋಗ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಹುಬ್ಬಳ್ಳಿ-ಧಾರವಾಡ ಕೈಗಾರಿಕೋದ್ಯಮಿಗಳ ವೇದಿಕೆ ವತಿಯಿಂದ ಇಲ್ಲಿಯ ಜೆ.ಸಿ. ನಗರದಲ್ಲಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮುರುಗೇಶ ನಿರಾಣಿ ಅವರ ಷಷ್ಟ್ಯಬ್ದಪೂರ್ಣ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾನು ಉದ್ಯಮಿಯಾಗಿ ಉದ್ಯೋಗ ನೀಡುಬೇಕು ಎಂಬ ತತ್ವ ಅಳವಡಿಸಿಕೊಂಡವನು. ಉದ್ಯಮಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕೈಗಾರಿಕೋದ್ಯಮಿ ರಾಜಕಾರಣಿ, ಟ್ರೇಡರ್ ಆಗಲು ಗಾಡ್‌ಫಾದ‌ರ್ ಬೇಕಾಗಿಲ್ಲ. ನಮ್ಮಲ್ಲಿನ ಯೋಚನೆಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎಂದರು.

ಹುಬ್ಬಳ್ಳಿ ಉತ್ತರ ಕರ್ನಾಟಕದ ಗೇಟ್‌ವೇ ಆಫ್ ಇಂಡಿಯಾ ಇದ್ದಂತೆ. ನನಗೆ ಬಾಗಲಕೋಟೆಗಿಂತ ಹೆಚ್ಚು ಪ್ರೀತಿ ಹುಬ್ಬಳ್ಳಿಯ ಮೇಲಿದೆ. ಹಾಗಾಗಿಯೇ ನನ್ನ ಷಷ್ಟ್ಯಬ್ದ ಮೊದಲ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿರುವುದು ಸಂತಸ ತಂದಿದೆ. ಇಲ್ಲಿಯವರ ಋಣವನ್ನು ನಾನು ಎಂದಿಗೂ ತೀರಿಸಲಾಗದು ಎಂದರು.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ''''''''ಆತ್ಮನಿರ್ಭರ ಭಾರತ'''''''' ಆರಂಭಿಸಿದ್ದರು. ಸ್ವಾವಲಂಬನೆ ಎಂದರೆ ಏನು ಎಂಬುದನ್ನು ಅಂದಿನ ಕಾಲದಲ್ಲೇ ತೋರಿಸಿಕೊಟ್ಟಿದ್ದಾರೆ. ನೂರು ವರ್ಷದ ಹಿಂದೆ ಟಾಪ್ ಟೆನ್ ಶ್ರೀಮಂತರಲ್ಲಿ ಮೈಸೂರಿನ ಮಹಾರಾಜರಿದ್ದರು. ನಮ್ಮ ರಾಜ್ಯದಲ್ಲಿರುವ ಅವಕಾಶ, ಸೌಲಭ್ಯ, ಯುವ ಸಮುದಾಯ, ಗುಜರಾತ್, ಉತ್ತರಪ್ರದೇಶ ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿಲ್ಲ. ಆದರೂ ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ. ಉದ್ಯಮಿಗಳು ಕೈಗಾರಿಕಾ ಸೌಲಭ್ಯ ಪಡೆದು ತಮ್ಮ ಪ್ರದೇಶದಲ್ಲಿಯೇ ಉದ್ಯಮ ಆರಂಭಿಸುವಂತೆ ಸಲಹೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿ ಎಫ್‌ಎಂಸಿಜಿ ಕ್ಲಸ್ಟ‌ರ್‌ ಸ್ಥಾಪನೆಗೆ ನಿರಾಣಿ ಸಚಿವರಾಗಿದ್ದಾಗ ಒಪ್ಪಂದ ಆಗಿದೆ. ಸರ್ಕಾರಗಳು ಬದಲಾದರೂ ನೀತಿ- ನಿಯಮಗಳು ಬದಲಾಗಬಾರದು. ಹೀಗಾದಲ್ಲಿ ಮಾತ್ರ ಹೆಚ್ಚು ಕೈಗಾರಿಕೆಗಳು ಹುಬ್ಬಳ್ಳಿಗೆ ಬರಲು ಸಾಧ್ಯ. ಸರ್ಕಾರ ಬದಲಾದಾಗ ಇಲ್ಲಿಯ ಭೂಮಿ ದರ ಹೆಚ್ಚಾಯಿತು. ಇದರಿಂದ ಕೈಗಾರಿಕೆಗೆ ಹಿನ್ನಡೆಯಾಯಿತು. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ಶಾಸಕ ಎನ್‌.ಎಚ್‌. ಕೋನರಡ್ಡಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಪ್ರೊ. ಅಶೋಕ ಶೆಟ್ಟ‌ರ್ ಮಾತನಾಡಿದರು. ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಕೆಎಲ್‌ಇ ತಾಂತ್ರಿಕ ವಿವಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಆರ್. ಪಾಟೀಲ ಅವರು ಬರೆದ "ಅಪ್ರತಿಮ ಸಾಧನೆಗೈದ ಗ್ರಾಮೀಣ ಸಾಧಕ ಶ್ರೀ ಮುರುಗೇಶ ನಿರಾಣಿ " ಪುಸ್ತಕ ಬಿಡುಗಡೆ ಮಾಡಲಾಯಿತು. ಬೆಂಗಳೂರು ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ಕೆಸಿಸಿಐ ಅಧ್ಯಕ್ಷ ಜೆ.ಕೆ. ಆದಪ್ಪಗೌಡರು, ಎನ್‌ಕೆಎಸ್‌ಎಸ್‌ಐಎ ಅಧ್ಯಕ್ಷ ರಮೇಶ ಪಾಟೀಲ, ಕೆಎಂಟಿಆರ್‌ಸಿ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಅವರನ್ನು ಸನ್ಮಾನಿಸಲಾಯಿತು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಕಾಸ ಸೊಪ್ಪಿನ, ಅಶೋಕ ಗಡದ ಸೇರಿದಂತೆ ಹಲವರಿದ್ದರು.