ಸಾರಾಂಶ
ತರೀಕೆರೆ, ಸಿರಿಧಾನ್ಯಗಳ ಬೇಸಾಯ ಮತ್ತು ಬಳಕೆಗೆ ಪ್ರಾಮುಖ್ಯತೆ ನಾವು ನೀಡಬೇಕು ಎಂದು ಚಿಕ್ಕನಾಯಕನಹಳ್ಳಿ ಸಿರಿಧಾನ್ಯ ರೈತ ಉತ್ಪಾದಕ ಕಂಪನಿ ಸಿಇಓ ಜಯರಾಮ್ ಹೇಳಿದ್ದಾರೆ.
ಕನ್ನಡಡಪ್ರಭ ವಾರ್ತೆ, ತರೀಕೆರೆ
ಸಿರಿಧಾನ್ಯಗಳ ಬೇಸಾಯ ಮತ್ತು ಬಳಕೆಗೆ ಪ್ರಾಮುಖ್ಯತೆ ನಾವು ನೀಡಬೇಕು ಎಂದು ಚಿಕ್ಕನಾಯಕನಹಳ್ಳಿ ಸಿರಿಧಾನ್ಯ ರೈತ ಉತ್ಪಾದಕ ಕಂಪನಿ ಸಿಇಓ ಜಯರಾಮ್ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರೀಕೆರೆಯಿಂದ ಸಮೀಪದ ಕೊರಟಿಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತು ಇಂದು ಪರಿಸರಕ್ಕೆ ಸಂಬಂಧಪಟ್ಟಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಜಾಗತಿಕ ತಾಪ ಮಾನದ ಏರಿಕೆ ಎಲ್ಲ ರಾಷ್ಟ್ರ ಗಳನ್ನೂ ಕಾಡುತ್ತಿರುವ ಸಮಸ್ಯೆ ಆಗಿದೆ. ಇದರಿಂದ ಮಾನವ ಕುಲದ ಆಹಾರ ಭದ್ರತೆಗೆ ದೊಡ್ಡ ರೀತಿಯಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇದೆ. ಸಿರಿಧಾನ್ಯಗಳು ಆರೋಗ್ಯಕರವಾಗಿದೆ ಎಂಬುದು ಮಾತ್ರವಲ್ಲ ಸಿರಿ ಧಾನ್ಯಗಳನ್ನು ಬೆಳೆಯುವುದು ಎಲ್ಲ ರೀತಿಯಲ್ಲೂ ಪರಿಸರ ಸ್ನೇಹಿಯಾದ ಆಯ್ಕೆಯಾಗಿದೆ ಎಂದು ಹೇಳಿದರು. ಸಿರಿಧಾನ್ಯಗಳ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯ ಸಿರಿಧಾನ್ಯಗಳ ಸಸಿಗಳು ಹೊಂದಿವೆ. ಜನತೆ ಈ ಸಿರಿಧಾನ್ಯಗಳನ್ನು ಸೇವಿಸುವ ಪರಿಪಾಠ ಆರಂಭಿಸುವ ಮೂಲಕ ಸಿರಿಧಾನ್ಯವನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.ಕೃಷಿ ಮೇಲ್ವಿಚಾರಕ ಸಂತೋಷ್ ಯೋಜನೆ ಅನುದಾನಗಳು, ಪ್ರಗತಿ ನಿಧಿ ಕಾರ್ಯಕ್ರಮಗಳು ಪಸಲು ವಿಮಾ ಬಗ್ಗೆ ಮಾಹಿತಿ ನೀಡಿದರು. ರೈತರು, ವಲಯ ಮೇಲ್ವಿಚಾರಕರು ಮಂಜುನಾಥ್, ಸೇವಾಪ್ರತಿನಿಧಿ ಆಶಾ ಮತ್ತು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.1ಕೆಟಿಆರ್.ಕೆ.8ಃತರೀಕೆರೆ ಸಮೀಪದ ಕೊರಟಿಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ಸಿರಿಧಾನ್ಯ ರೈತ ಉತ್ಪಾದಕ ಕಂಪನಿ ಸಿಇಓ ಜಯರಾಮ ಉದ್ಘಾಟಿಸಿದರು. ಊರಿನ ಮುಖಂಡರಾದ ಚಂದ್ರಶೇಖರ್, ಈಶ್ವರಪ್ಪ ಕೃಷಿ ಮೇಲ್ವಿಚಾರಕ ಸಂತೋಷ್ ಮತ್ತಿತರರು ಇದ್ದರು.