ಆಮ್ಲಜನಕ ನೀಡುವ ಗಿಡಮರಗಳ ಬೆಳೆಸಿ: ಡಾ.ವೀರೇಶ್

| Published : Mar 02 2024, 01:51 AM IST

ಸಾರಾಂಶ

ಪೊಲೀಸ್ ಠಾಣೆ, ಕೋರ್ಟ್, ಆಸ್ಪತ್ರೆಗಳೂ ಪರಿಸರದ ವ್ಯಾಪ್ತಿಯಲ್ಲಿ ಬರುತ್ತವೆ. ಬರೀ ಪಾಠ ಓದಿದರೆ ಸಾಲದು, ಅದರ ತಿರುಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಕೃತಿಯಲ್ಲಿ ಜಾರಿಗೆ ತಂದಾಗ ಮಾತ್ರ ಮನುಷ್ಯರ ಜೀವನ ಸಾರ್ಥಕವಾಗುತ್ತದೆ. ಪರಿಸರದಲ್ಲಿ ಗಿಡಮರಗಳು ಕೊಡುವ ಆಕ್ಸಿಜನ್‌ನಿಂದ ಸಮಾಜ ಆರೋಗ್ಯವಾಗಿರುತ್ತದೆ. ಉಚಿತವಾಗಿ ಆಕ್ಸಿಜನ್ ಕೊಡುವ ಗಿಡ ಮರಗಳನ್ನು ಉಳಿಸಿ ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಸರ ಅಂದಾಕ್ಷಣ ನೆನಪಾಗುವುದು ಬರೀ ಗುಡ್ಡ-ಬೆಟ್ಟ, ಅಲ್ಲಿರುವ ಗಿಡ-ಮರಗಳು ಅಷ್ಟೇ ಅಲ್ಲ ನಮ್ಮ ಸುತ್ತಲೂ ಇರುವ ವಿವಿಧ ಕ್ಷೇತ್ರಗಳ ವಾತಾವರಣವು ಚೆನ್ನಾಗಿರಬೇಕು ಎಂದು ಯುವ ವಿಜ್ಞಾನಿ, ದಾವಣಗೆರೆ ವಿವಿ ಪರಿಸರ ಮತ್ತು ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜೆ.ವೀರೇಶ್ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಏರ್ಪಡಿಸಿದ್ದ 266 ನೇ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಶಿಕ್ಷಣ ಕ್ಷೇತ್ರ, ಮಠದ ಪರಿಸರ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ ಎಂದರು.

ಪೊಲೀಸ್ ಠಾಣೆ, ಕೋರ್ಟ್, ಆಸ್ಪತ್ರೆಗಳೂ ಪರಿಸರದ ವ್ಯಾಪ್ತಿಯಲ್ಲಿ ಬರುತ್ತವೆ. ಬರೀ ಪಾಠ ಓದಿದರೆ ಸಾಲದು, ಅದರ ತಿರುಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಕೃತಿಯಲ್ಲಿ ಜಾರಿಗೆ ತಂದಾಗ ಮಾತ್ರ ಮನುಷ್ಯರ ಜೀವನ ಸಾರ್ಥಕವಾಗುತ್ತದೆ. ಪರಿಸರದಲ್ಲಿ ಗಿಡಮರಗಳು ಕೊಡುವ ಆಕ್ಸಿಜನ್‌ನಿಂದ ಸಮಾಜ ಆರೋಗ್ಯವಾಗಿರುತ್ತದೆ. ಉಚಿತವಾಗಿ ಆಕ್ಸಿಜನ್ ಕೊಡುವ ಗಿಡ ಮರಗಳನ್ನು ಉಳಿಸಿ ಬೆಳೆಸಬೇಕು. ಪ್ಲಾಸ್ಟಿಕ್‌ನಂತಹ ವಿಷದ ವಸ್ತುಗಳನ್ನು ಬೆಂಕಿಯಲ್ಲಿ ಸುಡಬೇಡಿ. ಅದರಿಂದ ಕ್ಯಾನ್ಸರ್ ರೋಗ ಉಲ್ಬಣವಾಗುತ್ತದೆ. ಆಗ ಆಸ್ಪತ್ರೆಗೆ ಹೋಗಿ ಆಕ್ಸಿಜನ್ ಖರೀದಿಸುತ್ತೇವೆ. ಇದರ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಬೇಕು ಎಂದರು.

ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಅನುರೇಣು ತೃಣಕಾಷ್ಟ ಎಂಬಂತೆ ಎಲ್ಲದರಲ್ಲಿಯೂ ಶಿವನ ಅನುಭವ ಹೊಂದಬೇಕು. ಪರಿಸರ ಮತ್ತು ವಿಜ್ಞಾನದ ತಿಳುವಳಿಕೆ ಅರಿತಿರಬೇಕು. ಒತ್ತಡದ ಜೀವನ ಶೈಲಿಯಲ್ಲಿಯೂ ಮನುಷ್ಯ ಪರಿಸರಕ್ಕೆ ಹೆಚ್ಚು ಕಾಳಜಿ ತೋರಿಸಬೇಕೆಂದರು.

ಲಿಂಗೈಕ್ಯ ಗೌರಮ್ಮ ಲಿಂ.ಕೆ.ತಿಪ್ಪಣ್ಣನವರ ಸ್ಮರಣಾರ್ಥ ಅವರ ಪುತ್ರ ಕೆ.ಟಿ.ಮಹಾಲಿಂಗಪ್ಪ, ಶೈಲ ಭಕ್ತಿ ಸೇವೆ ಸಲ್ಲಿಸಿದರು. ಟಿಎಚ್‌ಎಂ ಶಿವಕುಮಾರ ಸ್ವಾಮಿ ಪ್ರಾರ್ಥಿಸಿದರೆ, ಹಿರಿಯ ಪತ್ರಕರ್ತ ವೀರಪ್ಪ ಎಂ. ಭಾವಿ ಸ್ವಾಗತಿಸಿದರು. ಸಿದ್ಧಗಂಗಾ ಶಾಲೆಯ ಸಹಶಿಕ್ಷಕಿ ವಿ.ಬಿ.ತನುಜ ಕಾರ್ಯಕ್ರಮ ನಿರೂಪಿಸಿದರೆ, ಸುಜಾತ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶ್ವರ ದೇವರು, ಟ್ರಸ್ಟಿನ ಕಾರ್ಯದರ್ಶಿ ಎನ್.ಅಡಿವೆಪ್ಪ ಇತರರಿದ್ದರು.