ಸಾರಾಂಶ
ತೆಕ್ಕಟ್ಟೆ ಯಶಸ್ವಿ ಕಲಾವೃಂದ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ ಆಯೋಜಿಸಿದ್ದ ರಜಾರಂಗು ಶಿಬಿರ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಮಕ್ಕಳ ಮನಸ್ಸುಗಳು ಖಾಲಿ ಪುಟದಂತಿರುತ್ತದೆ, ಅಂತಹ ನಿರ್ಮಲ ಮನಸ್ಸುಗಳಲ್ಲಿ ಸಂಸ್ಕಾರ ಬೆಳೆಸಬೇಕು. ಬೇಸಿಗೆ ಶಿಬಿರಗಳಿಂದ ಮಕ್ಕಳ ಮನೋವಿಕಾಸ, ಜ್ಞಾನವೃದ್ಧಿಯಾಗುತ್ತದೆ. ಹೊಸ ಗೆಳೆಯರೊಂದಿಗೆ ಬೆರೆಯುವುದರಿಂದ ಆತ್ಮಸ್ಥೈರ್ಯ ಬೆಳೆಯುತ್ತದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಇಲ್ಲಿನ ತೆಕ್ಕಟ್ಟೆ ಯಶಸ್ವಿ ಕಲಾವೃಂದ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ ಆಯೋಜಿಸಿದ್ದ ರಜಾರಂಗು ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳು ಬೆಳವಣಿಗೆಯಲ್ಲೇ ಮುಂದಿನ ಹಾದಿ ಗೊತ್ತಾಗುತ್ತದೆ. ಹೆತ್ತವರು ಕಲಿಕೆಗೆ ಮಾತ್ರವಲ್ಲದೆ ಪಠ್ಯೇತರ ಚುಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು. ವಿದ್ಯೆ ಜೊತೆಗೆ ಯಕ್ಷಗಾನ, ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು. ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಬಗ್ಗೆ ಕಲಿಸಿಕೊಡಬೇಕು. ಕುಟುಂಬ - ಬಂಧು -ಬಳಗವನ್ನು ಪರಿಚಯಿಸಬೇಕು. ಇಲ್ಲದಿದ್ದರೆ ಮಕ್ಕಳು ದೊಡ್ಡವರಾಗಿ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸಿಕೊಡುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಮತ್ತು ರಂಗ ನಿರ್ದೇಶಕರಾದ ಶ್ರೀಶ ತೆಕ್ಕಟ್ಟೆ ಹಾಗೂ ಅಶೋಕ್ ಮೈಸೂರು ಇವರನ್ನು ಅಭಿವಂದಿಸಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ತಲ್ಲೂರು, ಗೆಳೆಯರ ಬಳಗ ಕಾರ್ಕಡದ ತಾರಾನಾಥ ಹೊಳ್ಳ, ಸದಾಶಿವ ರಾವ್ ಅರೆಹೊಳೆ, ನರೇಂದ್ರ ಕುಮಾರ್ ಕೋಟ, ಸಚಿನ್ ಅಂಕೋಲ, ಕಾರ್ಯಾಧ್ಯಕ್ಷರಾದ ಗೋಪಾಲ ಪೂಜಾರಿ, ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಬಿ.ವಿ. ಕಾರಂತ್ ರಚನೆ, ಅಶೋಕ್ ಶೆಟ್ಟಿ ಮೈಸೂರು ನಿರ್ದೇಶನದಲ್ಲಿ ಹಡ್ಡಾಯಣ ನಾಟಕ ಅದ್ಭುತವಾಗಿ ರಂಗ ಪ್ರಸ್ತುತಿಗೊಂಡಿತು.