ಸಾರಾಂಶ
ಸರಿಯಾದ ದಾಖಲಾತಿ ಇದ್ದರೂ ಅರಣ್ಯ ಇಲಾಖೆಯಿಂದ ವ್ಯವಸಾಯಕ್ಕೆ ಅಡ್ಡಿ । ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಚಂದಕವಾಡಿ ಹೋಬಳಿ, ಮೌಜೆ ಹೊಂಗಲವಾಡಿ, ಪುಣಜನೂರು ಸ್ಟೇಟ್ ಫಾರೆಸ್ಟ್ ಸ. ನಂ.೧, ೩ ಮತ್ತು ೫ರ ಜಮೀನುಗಳಲ್ಲಿ ಚಾಮರಾಜನಗರ ಟೌನ್‌ನ ೧೩ ಮತ್ತು ೧೪ ವಾರ್ಡ್‌ನ ಪ.ಜಾತಿಗೆ ಸೇರಿದ ಸಾಗುವಳಿದಾರರು, ಅರಣ್ಯ ಇಲಾಖೆಯವರು ನಮಗೆ ವ್ಯವಸಾಯ ಮಾಡಲು ಅವಕಾಶ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಅರೋಪಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕಾಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ಗೆ ಮನವಿ ಸಲ್ಲಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ನಮಗೆ ನ್ಯಾಯ ದೊರಕಿಸಿಕೊಡುವಂತೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾಜಿ ಸಚಿವರು ಮತ್ತು ರಾಜ್ಯಪಾಲರಾದ ಬಿ.ರಾಚಯ್ಯ, ೧೯೭೨-೭೩ನೇ ಸಾಲಿನಲ್ಲಿ ೧೫೦ ಕುಟುಂಬಕ್ಕೆ ಸಾಗುವಳಿಯನ್ನು ನೀಡಿದ್ದು ಅದರಂತೆ ದೊಡ್ಡರಾಯಪೇಟೆ, ಹೊಂಗಲವಾಡಿ, ಕರಿನಂಜನಪುರ, ಆಲೂರು ಜನರು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆಗಿನ ವಿಧಾನಸಭಾ ಸದಸ್ಯರಾಗಿದ್ದ ಪುಟ್ಟಸ್ವಾಮಿ ಮತ್ತು ಬಿ.ರಾಚಯ್ಯ ಭೂಮಿಯನ್ನು ಹಂಚಿರುತ್ತಾರೆ. ಆದರೆ ಅನೇಕ ಕಾರಣಗಳಿಂದ ಅರಣ್ಯ ಇಲಾಖೆಯವರು ಈ ಬಡ ನಿರ್ಗತಿಕ ಅನಕ್ಷರಸ್ಥ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಂಬೇಡ್ಕರ್ ಬಡಾವಣೆಯ ಸುಮಾರು ೧೫೦ ಕುಟುಂಬಗಳು ಎಕರೆ ೪೨೦೨ ಭೂಮಿಯಲ್ಲಿ ೨೫೬೨ ವ್ಯವಸಾಯ ಮಾಡುತ್ತಾ ಅನುಭವ ಹೊಂದಿರುತ್ತೇವೆ ಉಳಿಕೆ ೧೬೪ ಎಕರೆ ಜಮೀನನ್ನು ಅರಣ್ಯ ಇಲಾಖೆಯವರು ನಮ್ಮದು ಎಂದು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಭೂಮಿಯು ಬಡ ರೈತರಿಗೆ ಸರ್ಕಾರದಿಂದ ಸಾಗುವಳಿಯಾಗಿ ನಮಗೆ ನೀಡಿರುತ್ತಾರೆ. ಜಿಲ್ಲಾಧಿಕಾರಿಗಳು ಸಹ ಸ್ಥಳ ಪರಿಶೀಲನೆಯನ್ನು ಮಾಡಿರುತ್ತಾರೆ. ಹೀಗಿದ್ದರೂ ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಾ ಬರುತ್ತಿರುತ್ತಾರೆ ಹಲವಾರು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್‌ಗೆ ಮನವಿ ಮಾಡಿದ್ದರೂ ಕೂಡ ಇತ್ತೀಚಿನ ಜಿಲ್ಲಾಧಿಕಾರಿಯವರಿಂದ ಯಾವುದೇ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿಲ್ಲ ಎಂದರು.ಸಚಿವರಿಗೆ ಮನವಿ ಸಲ್ಲಿಕೆ೩ ಬಾರಿ ಅರಣ್ಯ ಇಲಾಖೆಯವರಿಗೆ ನೋಟಿಸ್ ಜಾರಿ ಮಾಡಿ ಇದರಲ್ಲಿ ಭೂ ದಾಖಲಾತಿಯ ಉಪನಿರ್ದೇಶಕರು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆಯನ್ನು ಕೂಡ ಮಾಡಿದ್ದು, ಅರಣ್ಯ ಇಲಾಖೆಯವರು ಯಾವುದೇ ದಾಖಲಾತಿಯನ್ನು ನೀಡಿರುವುದಿಲ್ಲ ಅನೇಕ ಬಾರಿ ಪ್ರತಿಭಟನೆಗಳೂ ನಡೆದಿದ್ದರೂ ನಮಗೆ ನ್ಯಾಯ ದೊರೆತಿರುವುದಿಲ್ಲ. ಆದರೆ ಈ ಹಿಂದೆ ಭೂದಾಖಲಾತಿಯ ಸಹಾಯಕ ನಿರ್ದೇಶಕರು ಮತ್ತು ಭೂಮಾಪಕರನ್ನು ನಿಯೋಜನೆ ಮಾಡಿ ಸರ್ವೆ ಕಾರ್ಯ ಮಾಡಿಕೊಟ್ಟು ಭೂಮಿಯ ಸರ್ವೆ ಸ್ಕೆಚ್ ಕೂಡ ಆಗಿರುತ್ತದೆ. ಈ ದಾಖಲಾತಿಯನ್ನು ಕಚೇರಿಗೆ ಸಲ್ಲಿಸಿರುತ್ತಾರೆ. ಅದರಂತೆ ನಮ್ಮ ಭೂಮಿಗೆ ಎಲ್ಲೆಯನ್ನು ಗುರುತಿಸಿ ಕಲ್ಲನ್ನು ಸಹ ಹಾಕಿ ಹಳದಿ ಬಣ್ಣವನ್ನು ಹಾಕಿ ಗುರುತಿಸಿರುತ್ತಾರೆ. ಹೀಗಿದ್ದರೂ ಕಂದಾಯ ಇಲಾಖೆಯವರು, ಅರಣ್ಯ ಇಲಾಖೆಯವರು ನಮಗೆ ಪದೇ ಪದೇ ವ್ಯವಸಾಯ ಮಾಡಲು ತೊಂದರೆ ಕೊಡುತ್ತಿದ್ದು ಇದನ್ನು ತಪ್ಪಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಿಗೆ ಮನವಿ ಮಾಡಿದರು.ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನಾಳೆಯಿಂದಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಸಾಗುವಳಿದಾರರಿಗೆ ವ್ಯವಸಾಯ ಮಾಡಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿ.ಪಂ. ಸಿಇಒ ಆನಂದಕುಮಾರ್ ಮೀನಾ ಇದ್ದರು. ಪ್ರತಿಭಟನೆಯಲ್ಲಿ ಸಿ.ಎಂ.ಶಿವಣ್ಣ, ನಾಗರಾಜು, ಸಿ.ಕೆ. ಮಂಜುನಾಥ್, ಬಸವಯ್ಯ, ಚಿನ್ನಸ್ವಾಮಿ, ರೇವಣ್ಣ, ನಂಜಮ್ಮ, ಕಮಲಮ್ಮ, ಶಿವಣ್ಣ, ನಂಜುಂಡಸ್ವಾಮಿ, ಸುಶೀಲ, ಮಹೇಶ, ಸಿದ್ದಣ್ಣ, ರಜನಿಕಾಂತ್, ದೊರೆಸ್ವಾಮಿ, ನಾಗಮ್ಮ, ಮಹೇಶ್, ಹನುಮಯ್ಯ, ರಾಜೇಶ್ವರಿ, ಮರಿಸ್ವಾಮಿ ಇತರರು ಭಾಗವಹಿಸಿದ್ದರು.