ಸಾರಾಂಶ
ಶಿರಹಟ್ಟಿ: ಕ್ರೀಡೆ, ಎನ್ನೆಸ್ಸೆಸ್, ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದ ಪ್ರಮುಖ ಅಂಗ. ವಿದ್ಯಾರ್ಥಿಗಳು, ಪಠ್ಯ ಚಟುವಟಿಕೆಯ ಜತೆ ಕ್ರೀಡೆ,ಸಾಂಸ್ಕೃತಿಕ ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ ಕರೆ ನೀಡಿದರು.
ಬೆಳ್ಳಟ್ಟಿ ಗ್ರಾಮದ ಬಿ.ಪಿ.ಅಳವಂಡಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸನ್ ೨೦೨೪-೨೫ ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರ ಸ್ವಾಗತ, ಎನ್ನೆಸ್ಸೆಸ್, ಕ್ರೀಡೆ, ಸಾಂಸ್ಕೃತಿಕ, ಕಾಲೇಜು ಸಂಸತ್ತು ಉದ್ಘಾಟನೆ ಮಾಡಿ ಮಾತನಾಡಿದರು.ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕೃತಿ ವಿಭಾಗಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಅರಿತುಕೊಳ್ಳಬೇಕು ಎಂದರು.
ಇಂದು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೇ ಕ್ರೀಡೆ ಮತ್ತು ಕಲೆ,ಸಂಸ್ಕೃತಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತಿದೆ. ಈ ಎರಡು ಕ್ಷೇತ್ರಗಳು ಬೆಳವಣಿಯಾಗಬೇಕಾದರೆ ಶಾಲಾ- ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ, ಎನ್ನೆಸ್ಸೆಸ್ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನವೀನಕುಮಾರ ಅಳವಂಡಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪೋಷಕರು ಕೇವಲ ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಶಾಲಾ- ಕಾಲೇಜುಗಳಲ್ಲಿ ಪಠ್ಯ ಶಿಕ್ಷಣದ ಜತೆಯಲ್ಲಿ ಕ್ರೀಡೆ ಮತ್ತು ಕಲೆ-ಸಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಗಿರೀಶ್ ಕೋಡಬಾಳ ಮಾತನಾಡಿ, ನೀವು ಯಾವುದೇ ರೀತಿಯ ಶಿಕ್ಷಣ ಪಡೆಯಿರಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅಗತ್ಯ. ಜೀವನದಲ್ಲಿ ಏಳು ಬೀಳು ಇದ್ದೇ ಇರುತ್ತದೆ. ಅದರಲ್ಲಿಯೇ ನಾವು ಜೀವನ ರೂಢಿಸಿಕೊಳ್ಳಬೇಕು. ನಮ್ಮ ಬೆಳವಣಿಗೆ, ವ್ಯಕ್ತಿತ್ವ ರೂಢಿಸಿಕೊಳ್ಳಲಿಕ್ಕೆ ಅವಶ್ಯಕ ಜ್ಞಾನ ಮಾತ್ರ ನಾವು ಅಳವಡಿಸಿಕೊಳ್ಳಬೇಕು ಎಂದರು.ನಿಮ್ಮ ಬದುಕು ಸುಂದರವಾಗಬೇಕಾದರೆ ನಿಮ್ಮಲ್ಲಿರುವ ಜ್ಞಾನ, ಸಾಮರ್ಥ್ಯದಿಂದ ಮಾತ್ರ ಸಾಧ್ಯ. ಸ್ವಯಂ ಸಾಧನೆ ನಿಮ್ಮ ಬದುಕಿಗೆ ದಾರಿದೀಪ. ಎಲ್ಲ ವಿದ್ಯಾರ್ಥಿಗಳು ವಿನಯದಿಂದ ಬದುಕಿದರೆ ವಿದ್ಯೆ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುವುದು. ವಿದ್ಯೆ ನಮ್ಮ ಸಂಗಾತಿ ಇದ್ದ ಹಾಗೆ. ಅದನ್ನು ಯಾರೂ ಸಹ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆ ವಿಧ್ಯೆಯಿಂದಲೇ ನಾವು ಸಾಧನೆ ಮಾಡಲು ಸಾಧ್ಯ. ಯಾವುದೇ ಕಾಯಕ ಮಾಡಿದರೂ ನಿಮಗೆ ಕಾಯಕ ತೃಪ್ತಿ ನೀಡುವಂತೆ ನೀವು ಬಾಳಿ ಎಂದು ತಿಳಿಸಿದರು.
ಪ್ರಾಚಾರ್ಯರ ಎಂ.ಆರ್. ಮೇಘಲಮಣಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎ. ಬಳಿಗೇರ, ಗ್ರಾಪಂ ಸದಸ್ಯರಾದ ತಿಮ್ಮರೆಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ್ ತಾಪಂ ಮಾಜಿ ಸದಸ್ಯ ತಿಮ್ಮರೆಡ್ಡಿ ಅಳವಂಡಿ ಉಪಸ್ಥಿತರಿದ್ದರು.ಕಾಲೇಜು ವಿದ್ಯಾರ್ಥಿನಿಯರು ಸ್ವಾಗತ ಹಾಗೂ ಕಾರ್ಯಕ್ರಮ ನಡೆಸಿಕೊಟ್ಟರು.