ಓಣಂ ಆಚರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮುದಾಯದ ಕಲೆ, ಸಂಸ್ಕೃತಿ, ಆಚಾರಗಳ‌ ಬಗ್ಗೆ ಸಾರ್ವಜನಿಕವಾಗಿ ತಿಳಿಯುವಂತಾಗುತ್ತದೆ ಎಂದು ಮಾಜಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಹೇಳಿದರು.

ಕುಶಾಲನಗರ: ಓಣಂ ಆಚರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮುದಾಯದ ಕಲೆ, ಸಂಸ್ಕೃತಿ, ಆಚಾರಗಳ‌ ಬಗ್ಗೆ ಸಾರ್ವಜನಿಕವಾಗಿ ತಿಳಿಯುವಂತಾಗುತ್ತದೆ ಎಂದು ಮಾಜಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಹೇಳಿದರು. ಕುಶಾಲನಗರ ಕೇರಳ‌ ಸಮಾಜದ ಆಶ್ರಯದಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ 26ನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ನಡೆದ ವಿಮಾನ ಪ್ರಕರಣದಲ್ಲಿ ಪೈಲೆಟ್ ಸ್ಮಿತ್ ಮಚ್ಚಾರ್ ಅವರ ಧೈರ್ಯದ ಬಗ್ಗೆ ಉಲ್ಲೇಖಿಸಿದ ಅಪ್ಪಚ್ಚುರಂಜನ್ ಅವರು, ಭಾರತ ವೀರರ ನಾಡು ಎಂದು‌ ಬಣ್ಣಿಸಿದರು.ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಓಣಂ ಎಂಬುದು ಕೇವಲ ಒಂದು ಸಮುದಾಯದ ಹಬ್ಬವಲ್ಲ. ಇದು ಪ್ರಕೃತಿ, ಸಮೃದ್ಧಿ ಮತ್ತು ಮಾನವೀಯತೆಯ ಸಂಕೇತ. ಕೇರಳದ ಸಂಸ್ಕೃತಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮಕ್ಕೂ‌ ಮುನ್ನ ಕೇರಳ ಸಮಾಜದ ಕಟ್ಟಡ ಬಳಿಯಿಂದ ಎಪಿಸಿಎಂಎಸ್ ಸಭಾಂಗಣ ತನಕ ಮಾವೇಲಿ ಸಹಿತ ಚಂಡೆ ವಾದ್ಯಗಳೊಂದಿಗೆ ಸಮಾಜ ಬಾಂಧವರಿಂದ ಮೆರವಣಿಗೆ ನಡೆಯಿತು. ಸಮಾಜದ ಸದಸ್ಯರ‌ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಚಿತ್ರಕಲಾ, ಪೂಕಳಂ‌ ಸ್ಪರ್ಧೆ, ತಿರುವಾದಿರ ಕಳಿ ಸೇರಿದಂತೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಹಿಂದೂ‌ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ, ಜಿ ಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಕುಶಾಲನಗರ ಎಸ್.ಎನ್.ಡಿ.ಪಿ ಅಧ್ಯಕ್ಷ ಗಣೇಶ್ ಇದ್ದರು. ಸಮಾಜದ ಉಪಾಧ್ಯಕ್ಷ ಬಾಬು, ಕಾರ್ಯದರ್ಶಿ ರಾಬಿನ್, ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ.ಆನಂದ್ ಮತ್ತಿತರರಿದ್ದರು.