ಕುಶಾಲನಗರ: ವಿದ್ಯಾರ್ಥಿಗಳು ತರಗತಿಯ ಪಾಠಗಳಿಗೆ ಮಾತ್ರ ಸೀಮಿತವಾಗದೇ ಸಂಗೀತ, ಕಲೆ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ, ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಶಾಸಕ ಡಾ. ಮಂತರ್ ಗೌಡ ಅಭಿಮತ ವ್ಯಕ್ತಪಡಿಸಿದರು.ಇಲ್ಲಿನ ಚಿಕ್ಕ ಅಳುವಾರದಜ್ಞಾನಕಾವೇರಿ ಆವರಣದ ಕೊಡಗು ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತರ್ ಕಾಲೇಜು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ಯುವ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಇದ್ದರೂ ಎಲ್ಲ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಯ ವಿಶ್ವವಿದ್ಯಾಲಯಗಳತ್ತ ಮುಖ ಮಾಡುತ್ತಿರುವುದು ಬೇಸರದ ಸಂಗತಿ. ನಮ್ಮ ಜಿಲ್ಲೆಯ ವಿಶ್ವವಿದ್ಯಾಲಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಮಕ್ಕಳಿಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ಕಲಿಯಲು ಪ್ರೋತ್ಸಾಹ ನೀಡಿ ವಿವಿಯನ್ನುಹೆಮ್ಮರವಾಗಿ ಬೆಳೆಸಬೇಕು. ಅದಕ್ಕಾಗಿ ವಿಶ್ವವಿದ್ಯಾಲಯವು ಈ ರೀತಿಯ ಸಾಂಸ್ಕೃತಿಕ, ಕ್ರೀಡಾ ಮತ್ತಿತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ವಿವಿಯತ್ತಸೆಳೆಯಬೇಕು ಎಂದು ಸಲಹೆ ನೀಡಿದರು.ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ: ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತಾರಾನಾಥ್ ಟಿ. ಸಿ. ಮಾತನಾಡಿ, ರಕ್ಷಣಾ, ಕ್ರೀಡೆ, ಸಾಹಿತ್ಯ, ಕಾಫಿ ಮತ್ತಿತರ ಕ್ಷೇತ್ರಗಳಲ್ಲಿ ಕೊಡಗು ಜಿಲ್ಲೆಯು ರಾಷ್ಟ್ರದಲ್ಲಿ ಹೆಸರುವಾಸಿ. ಇದಕ್ಕೆ ಮತ್ತೊಂದು ಗರಿಮೆ ಎಂಬಂತೆ ಈ ಕೊಡಗು ವಿಶ್ವವಿದ್ಯಾಲಯ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಕುಶಾಲನಗರ ತಾಲೂಕು ಅಧ್ಯಕ್ಷ ವಿ. ಪಿ. ಶಶಿಧರ್ ಮಾತನಾಡಿ, ಯುವ ವೈಭವ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿರುವ ವಿಶ್ವವಿದ್ಯಾಲಯದ ಈ ಪ್ರಥಮ ಪ್ರಯೋಗವನ್ನು ಸದೃಢಗೊಳಿಸುವ ಪ್ರಯತ್ನ ಮಾಡಿದವರಿಗೆ ಅಭಿನಂದನೆ ತಿಳಿಸಿದರು.
ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಕೊಡಗು ವಿಶ್ವವಿದ್ಯಾಲಯ ಕುಲಸಚಿವ ಮೌಲ್ಯಮಾಪನ ಡಾ.ಸುರೇಶ್ಎಂ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಐ ಕೆ ಮಂಜುಳಾ, ಎನ್ಎಸ್ಎಸ್ ಸಂಯೋಜಕರು ಮತ್ತು ಐಕ್ಯೂಎಸಿ ನಿರ್ದೇಶಕ ಡಾ. ಗುಣಶ್ರೀಬಿ.ಎಸ್. ಇದ್ದರು. ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪಆಲೂರು ಮಾತನಾಡಿ, ಈ ವರ್ಷ ಆರಂಭ ಆಗಿರುವ ಯುವ ವೈಭವ ಇನ್ನೂ ಮುಂದೆ ಪ್ರತಿ ವರ್ಷ ನಡೆಯುತ್ತದೆ. ವಿವಿಯ ಎಲ್ಲ 25 ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಈ ವೇದಿಕೆಯ ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.
ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಮತ್ತು ಅಂತರ್ ಕಾಲೇಜು ಯುವ ವೈಭವ ಉತ್ಸವದ ಸಂಯೋಜಕ ಮಂಜುನಾಥ್ ಗೌಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ಅಹಮದ್, ಕನ್ನಡ ವಿಭಾಗದ ವಿದ್ಯಾರ್ಥಿ ರಾಕೇಶ್ ಎನ್ ಪಿ ಮತ್ತು ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸನಿಗಾನಿರೂಪಿಸಿದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಲೋಕೇಶ್ ಭರಣಿ ವಂದಿಸಿದರು.