ಗದಗ: ಜಿಲ್ಲೆಯ ಸಾಂಸ್ಕೃತಿಕ ಪರಿಸರವನ್ನು ಜೀವಂತವಾಗಿರಿಸುವಲ್ಲಿ ಸೋಮಶೇಖರ ಚಿಕ್ಕಮಠ ನೇತೃತ್ವದ ನಟರಂಗ ಸಂಸ್ಥೆಯ ಪಾತ್ರ ಅಪಾರವಾಗಿದೆ ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.
ನಗರದ ಪಂ. ಭೀಮಸೇನ್ ಜೋಶಿ ರಂಗಮಂದಿರದಲ್ಲಿ ಗುರುವಾರ ಸಂಜೆ ನಟರಂಗ ಕಲ್ಚರಲ್ ಅಕಾಡೆಮಿ ಮತ್ತು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಕ್ಕಳ ಕಲರವ- 2026 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ದಶಮಾನೋತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದರು.ನಟರಂಗ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಿದೆ. ಈ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತಷ್ಟು ವಿಸ್ತಾರಗೊಳ್ಳಲು ಜಾಗದ ಅವಶ್ಯಕತೆ ಇರುವುದನ್ನು ಸಂಸ್ಥೆಯ ಪದಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು, ನಟರಂಗ ಸಂಸ್ಥೆಗೆ ಜಾಗ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಪ್ರೀತಿ ಹೊನಗುಡಿ ಮಾತನಾಡಿ, ಉತ್ತರ ಕರ್ನಾಟಕ ಕಲೆಯ ತವರೂರು. ಇಂದಿನ ಮೊಬೈಲ್ ಯುಗದಲ್ಲೂ ಜನಪದ ಮತ್ತು ಕಲಾ ಸಂಸ್ಕೃತಿಯನ್ನು ಜನ ಪೋಷಿಸುತ್ತಿದ್ದಾರೆ ಎಂಬುದಕ್ಕೆ ನಟರಂಗ ಸಂಸ್ಥೆಯ ಈ ಅದ್ಧೂರಿ ಕಾರ್ಯಕ್ರಮವೇ ಸಾಕ್ಷಿ. ಬೇಸಿಗೆ ಶಿಬಿರದ ಮೂಲಕ ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅದ್ಭುತವಾಗಿ ನಡೆಯುತ್ತಿದೆ ಎಂದರು.ಡಾ. ಎಸ್.ವಿ. ಶಿವನಗೌಡ ಮಾತನಾಡಿ, ನಟರಂಗ ಸಂಸ್ಥೆಯ ತರಬೇತುದಾರರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅನೇಕ ಮಕ್ಕಳು ಇಂದು ದೊಡ್ಡ ವೇದಿಕೆಗಳಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ. ಈ ಸಂಸ್ಥೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಅಡ್ನೂರು- ರಾಜೂರ- ಗದಗ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಟರಂಗ ಸಂಸ್ಥೆಯು ಸಮಾಜಕ್ಕೆ ಒಳ್ಳೆಯ ಕಲಾವಿದರನ್ನು ನೀಡುತ್ತಿದೆ. ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳಂತಹ ಮಹಾನ್ ಪ್ರತಿಭೆಗಳು ಈ ಮಣ್ಣಿನಿಂದ ಮತ್ತೆ ಮೂಡಿಬರಬೇಕಾದರೆ ಇಂತಹ ಸಂಸ್ಥೆಗಳಿಗೆ ಸ್ವಂತ ನೆಲೆ ಇರಬೇಕು. ಸರ್ಕಾರ ಇಂತಹ ಜನಪರ ಸಂಸ್ಥೆಗೆ ಸೂಕ್ತ ಆಶ್ರಯ ನೀಡಬೇಕು ಎಂದರು.ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಹಟ್ಟಿ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್, ಕಿರಣ ಬೂಮಾ, ಎಚ್.ಎಸ್. ಶಿವನಗೌಡ್ರ, ಶರಣಬಸಪ್ಪ ಗುಡುಮನಿ, ಜಿ.ಬಿ. ಪಾಟೀಲ, ಮುತ್ತಣ್ಣ ಮುಶಿಗೇರಿ, ವಿಜಯಕುಮಾರ ಹಿರೇಮಠ, ವಿಜಯಲಕ್ಷ್ಮೀ ಮಾನ್ವಿ, ಚಂದ್ರು ಹರಿಜನ, ಬಾಬು ನರಸಾಪುರ, ನಾಗರತ್ನಾ ಚಿಕ್ಕಮಠ, ರಾಮಚಂದ್ರ ಬಳ್ಳಾರಿ, ಮಹೇಶ ಕರಿಬಿಷ್ಟಿ, ನಟರಂಗ ಅಕಾಡೆಮಿಯ ಅಧ್ಯಕ್ಷ ಸೋಮಶೇಖರ ಚಿಕ್ಕಮಠ, ಪೂಜಾ ಚಿಕ್ಕಮಠ ಹಾಗೂ ಸಂಗೀತಾ ಶಿಗ್ಗಾಂವಿ ಇದ್ದರು. ರಾಹುಲ್ ರಾಠೋಡ ಪ್ರಾರ್ಥಿಸಿದರು. ಪತ್ರಕರ್ತ ಆನಂದಯ್ಯ ವಿರಕ್ತಮಠ ನಿರೂಪಿಸಿದರು. ನಂತರ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.