ಸಾಂಸ್ಕೃತಿಕ ವ್ಯಕ್ತಿತ್ವ ಜನರಲ್ಲಿ ಮಾನವೀಯತೆ, ಸಮಾನತೆ ಭಾವನೆ ಮೂಡಿಸುತ್ತದೆ: ಹುಲ್ಕೆರೆ ಮಹದೇವು

| Published : Aug 03 2025, 11:45 PM IST

ಸಾಂಸ್ಕೃತಿಕ ವ್ಯಕ್ತಿತ್ವ ಜನರಲ್ಲಿ ಮಾನವೀಯತೆ, ಸಮಾನತೆ ಭಾವನೆ ಮೂಡಿಸುತ್ತದೆ: ಹುಲ್ಕೆರೆ ಮಹದೇವು
Share this Article
  • FB
  • TW
  • Linkdin
  • Email

ಸಾರಾಂಶ

ನಾವೆಲ್ಲರೂ ಸುಸಂಸ್ಕೃತರಾಗಿ ಬಾಳಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಅಥವಾ ಸಾಹಿತ್ಯದ ರಚನೆಯ ಪ್ರಮಾಣ ಕಡಿಮೆ ಆಗುತ್ತಿದೆ. ಸಾಹಿತಿಗಳು ಅಧ್ಯಯನದ ಜೊತೆಗೆ ವಿಶಾಲ ಭಾವನೆ ರೂಢಿಸಿಕೊಂಡಾಗ ಮಾನವತಾವಾದದ ಬರವಣಿಗೆ ಸೃಷ್ಟಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಂಸ್ಕೃತಿಕ ವ್ಯಕ್ತಿತ್ವ ಇರುವ ಜನರಲ್ಲಿ ಮಾನವೀಯತೆ ಮತ್ತು ಸಮಾನತೆಯ ಭಾವನೆಯನ್ನು ಅರಳಿಸುತ್ತದೆ ಎಂದು ಸಾಹಿತಿ ಹುಲ್ಕೆರೆ ಮಹದೇವು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸಿಂಧುಶ್ರೀ ಕಲಾ ಸಂಸ್ಥೆ, ಸಂಧ್ಯಾ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಭಾನುವಾರ ನಡೆದ ಹಿರಿಯ ಮತ್ತು ಕಿರಿಯ ಕಲಾವಿದರ ಹಾಗೂ ಸಾಹಿತ್ಯಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಪೋಷಣೆ ಆಗುವುದಿಲ್ಲವೋ ಅಂತಹ ಸಮಾಜ ವಿನಾಶದ ಕಡೆಗೆ ಸಾಗುತ್ತದೆ. ಸಾಂಸ್ಕೃತಿಕ ವ್ಯಕ್ತಿತ್ವ ಸಮಾಜಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸುತ್ತದೆ ಎಂದರು.

ನಾವೆಲ್ಲರೂ ಸುಸಂಸ್ಕೃತರಾಗಿ ಬಾಳಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಅಥವಾ ಸಾಹಿತ್ಯದ ರಚನೆಯ ಪ್ರಮಾಣ ಕಡಿಮೆ ಆಗುತ್ತಿದೆ. ಸಾಹಿತಿಗಳು ಅಧ್ಯಯನದ ಜೊತೆಗೆ ವಿಶಾಲ ಭಾವನೆ ರೂಢಿಸಿಕೊಂಡಾಗ ಮಾನವತಾವಾದದ ಬರವಣಿಗೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್‌.ಸಂದೇಶ್‌ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸೈದ್ಧಾಂತಿಕವಾಗಿ ನಡೆಯುತ್ತಿರುವ ಎಡ ಬಲದ ಸಂಘರ್ಷಗಳ ನಡುವೆ ವಾಸ್ತವ ಸಂಗತಿಗಳು ದೂರಾಗುತ್ತಿವೆ. ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸದ ಸಾಹಿತ್ಯ ಜಡವಾಗಿ ಉಳಿಯುತ್ತದೆ. ಸಾಹಿತಿಗಳಲ್ಲಿ ಸದಾ ಸಾಮಾಜಿಕ ಸ್ಪಂದನೆಯ ಮನೋಭಾವನೆ ಇರಬೇಕು ಎಂದು ಸಲಹೆ ನೀಡಿದರು.

ಸಾಹಿತಿಗಳಿಗೆ ಸಂವಿಧಾನದ ಆಶಯಗಳೇ ಅಜೆಂಡ ಆಗಬೇಕು. ಸಂವಿಧಾನದಲ್ಲಿರುವ ಸೋದರತ್ವ ಸಮಾನತೆ ಹಾಗೂ ಮಾನವೀಯ ಗುಣಗಳು ತಮ್ಮ ಬರಹದ ರೂಪದಲ್ಲಿ ಜನ ಸಾಮಾನ್ಯರನ್ನು ತಲುಪಿದರೆ ಸಮಾಜದ ಸುಧಾರಣೆ ಸಾಧ್ಯವಾಗಬಹುದು. ವಿಶೇಷವಾಗಿ ಯುವ ಸಾಹಿತಿಗಳು ಗಂಭೀರ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಬರಹಗಾರ ಬಳಗದ ಅಧ್ಯಕ್ಷ ಸತೀಶ್‌ ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರು, ಸಾಹಿತಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ಕಾಳೇನಹಳ್ಳಿ ಕೆಂಚೇಗೌಡ, ಬಸವರಾಜು ಸಂಪಹಳ್ಳಿ, ಮಾರ್ಕಾಲು ದೇವರಾಜು, ಡಾ.ಮನೋಹರ್‌, ಕಾನೂನು ಶಿಕ್ಷಕ ಕೆ.ಎಸ್‌.ಜಯಕುಮಾರ್‌, ರೇಷ್ಮೆ ಕೃಷಿಕ ಗರಕಹಳ್ಳಿ, ಕವಿ ಕಲ್ಕುಣಿ ಲೋಕೇಶ್‌, ಟ್ರಸ್ಟ್‌ ಅಧ್ಯಕ್ಷ ಹೆಮ್ಮಿಗೆ ಶಿವಣ್ಣ ಭಾಗವಹಿಸಿದ್ದರು.