ಕೊಪ್ಪಳ: ಗ್ರಾಮೀಣ ಸೊಗಡಿನ ಕಲೆ, ಸಂಗೀತ,ನೃತ್ಯ ಹಾಗೂ ನಾಟಕಗಳ ವೈವಿಧ್ಯಮಯ ಪ್ರದರ್ಶನದ ಮೂಲಕ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಜನಮನ ಸೆಳೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳದಿಂದ 2026-27ನೇ ಸಾಲಿನ ಸಾಮಾನ್ಯ ಯೋಜನೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಕಲಾವಿದರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ಲಂಬಾಣಿ ನೃತ್ಯ, ಗಮಕ, ಕಥಾ ಕೀರ್ತನ, ಹಗಲುವೇಷ, ಕೋಲಾಟ ಹಾಗೂ ಕರಡಿ ಮಜಲು ಸೇರಿದಂತೆ ವಿವಿಧ ಕಲಾ ಪ್ರಕಾರ ಪ್ರದರ್ಶಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಾಂದಪಾಷಾ ಕಿಲ್ಲೇದಾರ್ ಮಾತನಾಡಿ, 58 ವರ್ಷ ಮೇಲ್ಪಟ್ಟ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ ಅಥವಾ ಗೌರವಧನವಾಗಿ ತಿಂಗಳಿಗೆ ₹2,500 ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಹಿರಿಯ ಕಲಾವಿದರು ಅಗತ್ಯ ದಾಖಲೆಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಮಾಜ ಸೇವಕ ತೋಟಪ್ಪ ಕಾಮನೂರು ಮಾತನಾಡಿ, ಡೊಳ್ಳಿನ ಪದ, ಗೀಗೀ ಪದ, ಚೌಡ್ಕಿ ಪದ ಸೇರಿದಂತೆ ಗ್ರಾಮೀಣ ಕಲಾ ಪ್ರಕಾರಗಳ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಯೋಗಾನಂದ ಲೇಬಗೇರಿ ಮಾತನಾಡಿ, ಗ್ರಾಮೀಣ ಸೊಗಡು ಉಳಿಸಿ ಬೆಳೆಸುವ ಜತೆಗೆ ಹಿರಿಯ ಕಲಾವಿದರಿಗೆ ನೆರವು ನೀಡಬೇಕು. ಅವರ ಕಲೆಗೆ ಗೌರವ ದೊರೆಯಬೇಕು ಎಂದರು.


ಕುಷ್ಟಗಿಯ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಸಂಗಡಿಗರ ಶಾಸ್ತ್ರೀಯ ಸಂಗೀತ, ಭಾಗ್ಯನಗರದ ರಾಮಚಂದ್ರಪ್ಪ ಉಪ್ಪಾರ ತಂಡದ ಸುಗಮ ಸಂಗೀತ, ಹಾಲಬಕಟ್ಟಿಯ ದಾವಲಸಾಬ್‌ ಅತ್ತಾರ್ ತಂಡದ ಜಾನಪದ ಸಂಗೀತ, ಕಲಿಕೇರಿಯ ಹನುಮವ್ವ ರಾಥೋಡ್ ತಂಡದ ಲಂಬಾಣಿ ನೃತ್ಯ, ಕಾರಟಗಿಯ ರಾಚಯ್ಯ ಹಿರೇಮಠ ತಂಡದ ಗಮಕ–ಕಥಾ ಕೀರ್ತನ, ಗಂಗಾವತಿಯ ಕಲ್ಯಾಣ ನಾಗರಾಜ ತಂಡದ ಹಗಲುವೇಷ ಕುಣಿತ, ಬಹದ್ದೂರ್ ಬಂಡಿಯ ಮೆಹಬೂಬ ಜಾಗೀರದಾರ್ ತಂಡದ ಕೋಲಾಟ ಹಾಗೂ ಕಿನ್ನಾಳದ ಚಿದಾನಂದಪ್ಪ ಎಚ್.ತಂಡದ ಕರಡಿ ಮಜಲು ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.

ಕವಲೂರಿನ ಬಸವರಾಜ ಹೊಸರೂರು ಹಾಗೂ ಸಂಗಡಿಗರು ಕಾಳಘಟಕಿ ನಾಟಕ ಪ್ರದರ್ಶಿಸಿದರು. ಗ್ರಾಮ–ಪಟ್ಟಣಗಳ ಸಂಸ್ಕೃತಿ, ಬದಲಾಗುತ್ತಿರುವ ಕಾಲಘಟ್ಟ ಹಾಗೂ ಮರೆಯಾಗುತ್ತಿರುವ ಮಾನವೀಯ ಮೌಲ್ಯ ಮತ್ತು ಸಂಬಂಧಗಳ ಕುರಿತು ನಾಟಕದ ಪ್ರಸಂಗಗಳು ಪ್ರೇಕ್ಷಕರ ಮನಮುಟ್ಟಿದವು.

ಎಸ್‌ಡಿಎಂಸಿ ಅಧ್ಯಕ್ಷ ಮಹೇಬೂಬ್‌ ಮುದ್ದಾಬಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ನಡುಲಮನಿ, ಮಾಜಿ ಸದಸ್ಯ ಮಹಮ್ಮದ್ ರಫಿ ಹಿರೇಮಸೂತಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪಿಡಿಒ ಬಸವರಾಜ ಕೀರ್ತಿ, ಅಲಬಣ್ಣ ಕಣವಿ, ದಾವಲಸಾಬ್‌ ಚಿಕ್ಕಮಸೂತಿ, ಅಬ್ದುಲ್ ರೆಹಮಾನ ಹಿರೇಮಸೂತಿ, ಶಿವಪ್ಪ ಗ್ಯಾನಪ್ಪನವರ, ಮೇಹಬೂಬ ಮಣ್ಣೂರ, ಯಮನೂರಸಾಬ್‌ ಹಿರೇಮಸೂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸ್ವಾಗತಿಸಿದರು.