ಕೂಡಲಸಂಗಮದಲ್ಲಿ ಇಂದು ಶರಣರ ಸಾಂಸ್ಕೃತಿಕ ವೈಭವ

| Published : Apr 28 2025, 11:50 PM IST

ಕೂಡಲಸಂಗಮದಲ್ಲಿ ಇಂದು ಶರಣರ ಸಾಂಸ್ಕೃತಿಕ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಏ.29 ಮತ್ತು 30ರಂದು ಹಮ್ಮಿಕೊಳ್ಳಲಾದ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮಕ್ಕೆ ಸಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಕೂಡಲಸಂಗಮದಲ್ಲಿ ಏ.29 ಮತ್ತು 30ರಂದು ಹಮ್ಮಿಕೊಳ್ಳಲಾದ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮಕ್ಕೆ ಸಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

ಕೂಡಲಸಂಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಸಿದ್ಧತೆ ಕುರಿತು ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ ಎರಡು ದಿನಗಳ ಕಾಲ ಸಾಂಸ್ಕೃತಿ ವೈಭವ ಕಾರ್ಯಕ್ರಮ ನಡೆಯಲಿದ್ದು, ಅನುಭವ ಮಂಟದಲ್ಲಿ ವೇದಿಕೆ ಕಾರ್ಯಕ್ರಮ ಸಜ್ಜುಗೊಳಿಸಲಾಗಿದೆ ಎಂದರು.

ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿ, ಹಣಕಾಸು, ಸಾರಿಗೆ, ವಸತಿ, ಆಹಾರ, ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಮತ್ತು ನೈರ್ಮಲೀಕರಣ, ಕಾನೂನು ಸುವ್ಯವಸ್ಥೆ, ವೇದಿಕೆ ಸಮಿತಿ ಸೇರಿದಂತೆ 11 ಸಮಿತಿ ರಚಿಸಲಾಗಿದೆ. ವೇದಿಕೆ ಕಾರ್ಯಕ್ರಮ ನಡೆಯುವ ಬಸವ ಮಂಟಪದದ ಹೊರಗಡೆ ಶಾಮಿಯಾನ ಹಾಕಿ ಎಲ್ಇಡಿ ಪರದೆಯ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ವೀಕ್ಷಣೆಗೆ ಬರುವ ಜನರಿಗೆ ದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏ.29ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಚನ ಸಾಹಿತ್ಯ ಸಮಕಾಲಿನ ಸಂವೇದನೆ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡುವರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಂಜೆ ಸಂಗೀತ, ಸಮೂಹ ನೃತ್ಯ, ಭರತನಾಟ್ಯ, ವಚನಗಾಯನ, ನೃತ್ಯ ರೂಪಕ, 3ಡಿ ಬಸವನೃತ್ಯ ಹಾಗೂ ನಾಟಕ ಪ್ರದರ್ಶನಗೊಳ್ಳಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೇರಿದಂತೆ ವಿವಿಧ ಸಮಿತಿ ಅಧ್ಯಕ್ಷರು ಸದಸ್ಯರು ಇದ್ದರು.

ಸಿದ್ದರಾಮಯ್ಯ ಉದ್ಘಾಟನೆ

ಏ.30ರಂದು ಬಸವ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡುವರು. ಸಂಜೆ ಹಂಸಲೇಖ ತಂಡದಿಂದ ಹಾಗೂ ಡಾಲಿ ಧನಂಜಯ ಮತ್ತು ಎಂ.ಡಿ. ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮ ಸಹ ನಡೆಯಲಿದೆ.