ಸಾರಾಂಶ
ತಮ್ಮಲ್ಲಿರುವ ಕಲೆ, ನಟನಾ ಕೌಶಲ್ಯವನ್ನು ಪ್ರದರ್ಶಿಸಲು, ತಮ್ಮ ವೃತ್ತಿ ಜೀವನದ ಬದುಕನ್ನು ರಂಗಭೂಮಿಯಲ್ಲಿ ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟಿ ಆಶಾಭಾವ ಹೊಂದಿರುವ ವಿದ್ಯಾರ್ಥಿ ಕಲಾವಿದರಿಗೆ ಇದು ಒಂದು ಅತ್ಯುತ್ತಮ ಅವಕಾಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾರಂತ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ರಂಗ ತಂಡ, ರಂಗಭೂಮಿ, ನಾಟಕ ಮತ್ತು ಕಲೆಯಲ್ಲಿ ಅಭಿರುಚಿ ಹೊಂದಿದ್ದು ಅದನ್ನು ಅನುಭವಿಸಿ ಆನಂದಿಸುವ ಇಚ್ಚೆ ಉಳ್ಳಂತಹ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ವೇದಿಕೆ.ತಮ್ಮಲ್ಲಿರುವ ಕಲೆ, ನಟನಾ ಕೌಶಲ್ಯವನ್ನು ಪ್ರದರ್ಶಿಸಲು, ತಮ್ಮ ವೃತ್ತಿ ಜೀವನದ ಬದುಕನ್ನು ರಂಗಭೂಮಿಯಲ್ಲಿ ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟಿ ಆಶಾಭಾವ ಹೊಂದಿರುವ ವಿದ್ಯಾರ್ಥಿ ಕಲಾವಿದರಿಗೆ ಇದು ಒಂದು ಅತ್ಯುತ್ತಮ ಅವಕಾಶ ಕಲ್ಪಸಿಕೊಡುವಂತಹ ವೇದಿಕೆ.
ಸಾರಂತ ತಂಡದ ವಿದ್ಯಾರ್ಥಿಗಳು ನುರಿತ ಕಲಾ ತಂಡದ ಮಾರ್ಗದರ್ಶನದಡಿ ಕಲಿತು ಪ್ರದರ್ಶನ ನೀಡಿದಂತಹ ಒಂದು ಅದ್ಭುತ ನಾಟಕ ಪ್ರದರ್ಶನವೇ ಮಹಾಮಾಯಿ. ಮೇ 6 ರಂದು ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಪ್ರದರ್ಶಿತವಾಯಿತು.ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಕಾರ್ಯನಿರ್ವಹಿಸಿದ ಡಾ. ಚಂದ್ರಶೇಖರ ಕಂಬಾರರು ಈ ಮಹಾಕೃತಿಯ ರಚನಾಕಾರರಾಗಿದ್ದಾರೆ.
ಈ ನಾಟಕವನ್ನು ಯತೀಶ್ ಎನ್. ಕೊಳ್ಳೇಗಾಲ ಅವರು ನಿರ್ದೇಶಿಸಿದ್ದು, ಶ್ರೀ ಸುಪ್ರೀತ್ ಭಾರದ್ವಾಜ್ ಮತ್ತು ಭ್ರಮರ ಉಡುಪ ಅವರು ಸಂಗೀತ ಮತ್ತು ಸಾಂಗತ್ಯ ಸಂಯೋಜನೆ ಮಾಡಿದ್ದು, ರಂಗಸಜ್ಜಿಕೆ, ವಸ್ತ್ರ ಮತ್ತು ಪರಿಕರದ ವ್ಯವಸ್ಥೆಯನ್ನು ಪಿ. ಶ್ರೇಯಸ್ ಅವರು ಮಾಡಿದ್ದು, ಬೆಳಕಿನ ವ್ಯವಸ್ಥೆ ಮಧುಸೂಧನ್ ನೀನಾಸಂ ಅವರು ನೆರವೇರಿಸಿದ್ದು, ಸಾರಂತ ಕಲಾ ತಂಡದ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.ಮಹಾಜನ ಕಾಲೇಜಿನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ಮುರಳೀಧರ್ ಹಾಗೂ ಪ್ರಾಂಶುಪಾಲೆ ಡಾ. ಬಿ.ಆರ್. ಜಯಕುಮಾರಿ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ನಾಟಕವು ಅತ್ಯುತ್ತಮವಾಗಿ ಪ್ರದರ್ಶಿಸುವಲ್ಲಿ ಸಹಕಾರಿಯಾದರು.