ಸಾರಾಂಶ
ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದ ಸಂಸ್ಕೃತಿ ಉಳಿಸುವ ಜತೆಗೆ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಲು ಸಾಧ್ಯ ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ. ರಾಮಪ್ಪ ಕರೆ ನೀಡಿದರು.
ಶಿರಹಟ್ಟಿ: ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದ ಸಂಸ್ಕೃತಿ ಉಳಿಸುವ ಜತೆಗೆ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಲು ಸಾಧ್ಯ ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ. ರಾಮಪ್ಪ ಕರೆ ನೀಡಿದರು.ಶಿರಹಟ್ಟಿ ತಾಲೂಕಿನ ಪರಸಾಪುರದ ಶರಣಬಸವೇಶ್ವರ ದೇವಸ್ಥಾನಕ್ಕೆ ಧರ್ಮದರ್ಶಿ ಡಾ. ರಾಮಪ್ಪ ಹಾಗೂ ದಂಪತಿ ಆಗಮಿಸಿ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಅರಿವು, ಧಾರ್ಮಿಕ ಭಾವನೆ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮನೆಯಲ್ಲಿ ಪ್ರತಿ ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಧರ್ಮ ಬೋಧನೆಯ ತತ್ವಗಳನ್ನು ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು. ನಮ್ಮ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ. ಹಿಂದು ಸಮಾಜದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಹೊಂದುವುದು ಅವಶ್ಯಕವಾಗಿದೆ. ತಮ್ಮ ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಡಿಸಿದರೂ ಮೊದಲು ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ. ರಾಮಾಯಣ, ಮಹಾಭಾರತ ಗೀತೆಯಂಥ ಉತ್ತಮ ಗ್ರಂಥಗಳ ಜ್ಞಾನವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ, ಪುರಾಣ, ಪ್ರವಚನ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ. ಪ್ರತಿಯೊಬ್ಬರೂ ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಅನುಸಾರವಾಗಿ ಹುಟ್ಟಿಕೊಂಡಿರುವ ಎಲ್ಲ ಜಾತಿಗಳು ಧರ್ಮ ಬೋಧನೆ ನಡೆಸುತ್ತಿವೆ ಎಂದರು. ವಿವಿಧ ಧರ್ಮಗಳು ನಾಡಿನಲ್ಲಿದ್ದರೂ ಕೊನೆಗೆ ಐಕ್ಯಸ್ಥಾನ ಒಂದೇ ಆಗಿದೆ. ನೊಂದ ಜೀವಿಗಳನ್ನು ಹಸನು ಮಾಡುವ ಶಕ್ತಿಯುಳ್ಳ ನಮ್ಮ ಸಂಸ್ಕೃತಿ ಅರ್ಥೈಸಿಕೊಳ್ಳಲು ವಿದೇಶಿಗರು ಒಲವು ತೋರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಧರ್ಮದ ಜಾಗೃತಿ, ಮೌಲ್ಯ ಉಳಿಸಿ ಬೆಳೆಸಿಕೊಂಡು ಬದುಕಿಗೆ ಅರ್ಥ ತಂದುಕೊಡುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಕರೆ ನೀಡಿದರು. ಪ್ರಸ್ತುತ ಅಪಾರ ಸಂಖ್ಯೆಯ ಯುವಕರು ದುಶ್ಚಟಗಳಿಗೆ ಮಾರು ಹೋಗಿ ಅಮೂಲ್ಯ ಜೀವನ ನಾಶಪಡಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿನ ಗುರು ಹಿರಿಯರು, ತಂದೆ-ತಾಯಿ ಯುವಕರಿಗೆ ಬುದ್ಧಿ ಹೇಳುವ ಮೂಲಕ ಅವರನ್ನು ಮತ್ತೆ ಸರಿದಾರಿಗೆ ಕರೆತರುವ ಅಗತ್ಯವಿದೆ. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಜೀವನ ಅರ್ಥಪೂರ್ಣ ಎನಿಸಲಿದೆ. ಗಳಿಸಿದ್ದನ್ನು ಹಿತಮಿತವಾಗಿ ಬಳಸಿಕೊಂಡು ಪರೋಪಕಾರಿಯಾಗಿ ಸಂತೋಷ, ನೆಮ್ಮದಿಯ ಜೀವನ ನಡೆಸಲು ಸಂಕಲ್ಪಿಸಬೇಕಿದೆ ಎಂದರು. ಪರಸಾಪುರ ಗ್ರಾಮದ ಗುರು ಹಿರಿಯರು ಈ ನಿಟ್ಟಿನಲ್ಲಿ ಕಳೆದ ೨೧ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಿರುವ ತಮ್ಮ ಕಾರ್ಯ ಶ್ಲಾಘನೀಯವಾದುದು ಎಂದು ಹರಸಿದರು.ಶರಣಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಶರಣಪ್ಪ ಈಳಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಈಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಪರಶುರಾಮ ಈಳಿಗೇರ, ಸದಸ್ಯ ಪಾಲಾಕ್ಷಪ್ಪ ಈಳಿಗೇರ, ಮಾರುತಿ ಭಜಂತ್ರಿ, ರಮೇಶ್ ಜೋಗಿ, ಪ್ರಕಾಶ್ ಬೊಮ್ಮನಹಳ್ಳಿ, ಆನಂದ ಈಳಿಗೇರ ಸೇರಿದಂತೆ ಅನೇಕರು ಇದ್ದರು. ಪವನ್ ಈಳಿಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.