ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆ ಸಂಬಂಧಿತ ಸಂಶೋಧನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸಂಸ್ಕೃತಿ ಅಧ್ಯಯನ ಕುರಿತ ಸಂಶೋಧನೆಗಳು ಅತ್ಯಂತ ಮಹತ್ವ ಹೊಂದಿವೆ

ಹೊಸಪೇಟೆ: ಸಂಸ್ಕೃತಿ ಪ್ರತಿಯೊಂದು ಕಾಲಘಟ್ಟದಲ್ಲೂ ಬದಲಾವಣೆಗೊಳ್ಳುತ್ತಾ ಸಂಶೋಧನಾ ಅಧ್ಯಯನ ವಿಧಾನಗಳ ಮೂಲಕ ಹೊಸ ಅರ್ಥಗಳನ್ನು ಪಡೆದು ಮುನ್ನೆಲೆಗೆ ಬರುತ್ತದೆ. ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆ ಸಂಬಂಧಿತ ಸಂಶೋಧನೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸಂಸ್ಕೃತಿ ಅಧ್ಯಯನ ಕುರಿತ ಸಂಶೋಧನೆಗಳು ಅತ್ಯಂತ ಮಹತ್ವ ಹೊಂದಿವೆ ಎಂದು ಲೇಖಕಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯೆ ಡಾ.ಸುಮಾ ಬಿ.ಯು. ಅವರು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ವತಿಯಿಂದ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯುಜಿಸಿ ಪಿಎಚ್.ಡಿ ಕೋರ್ಸ್‌ ವರ್ಕ್‌ ಮೊದಲನೇ ಹಂತದ ಸಂಶೋಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತಿ ಅಧ್ಯಯನದಲ್ಲಿ ಭಾವನೆ, ವಿಧಾನ ಹಾಗೂ ಗ್ರಹಿಕೆ ಪ್ರಮುಖ ಅಂಶಗಳಾಗಿವೆ. ಭಾಷೆ, ಸಾಮಾಜಿಕತೆ, ಆರ್ಥಿಕತೆ, ರಾಜಕೀಯ, ಮನಶಾಸ್ತ್ರ ಹಾಗೂ ಐಡಿಯಾಲಜಿಗಳು ಸಂಸ್ಕೃತಿಯೊಳಗೆ ಆಳವಾಗಿ ಹೂತು ಹೋಗಿರುವುದರಿಂದ ಅವುಗಳನ್ನು ಸೂಕ್ತವಾಗಿ ಗ್ರಹಿಸುವ ಅಗತ್ಯವಿದೆ ಎಂದರು.ಸಂಸ್ಕೃತಿ ಎನ್ನುವುದು ವಿಶಾಲ ಕ್ಷೇತ್ರವಾಗಿದ್ದು, ಅದನ್ನು ಒಂದೇ ವ್ಯಾಖ್ಯಾನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಪ್ರತಿಯೊಂದು ಕಾಲಘಟ್ಟದಲ್ಲೂ ಸಂಸ್ಕೃತಿ ರೂಪಾಂತರಗೊಳ್ಳುತ್ತದೆ. ಬ್ರಿಟಿಷ್ ಹಾಗೂ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಸಂಸ್ಕೃತಿಗೆ ಸಂಬಂಧಿಸಿದ ವಿರೋಧಗಳು ಆರಂಭಗೊಂಡಿದ್ದು, 19ನೇ ಶತಮಾನದ ಆರಂಭದಲ್ಲಿ ಸಂಸ್ಕೃತಿಗೆ ಭದ್ರ ಬುನಾದಿ ರೂಪುಗೊಂಡಿತು. ಸಂಸ್ಕೃತಿಯನ್ನು ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ನೆಲೆಯಲ್ಲಿ ಅಧ್ಯಯನ ಮಾಡಬಹುದಾದರೂ, ಅದನ್ನು ನೋಡುವ, ಓದುವ, ಗ್ರಹಿಸುವ ಹಾಗೂ ಅರ್ಥೈಸುವ ದೃಷ್ಟಿಕೋನ ಭಿನ್ನವಾಗಿರಬೇಕು. ಸಂಸ್ಕೃತಿ ಅಧ್ಯಯನಗಳ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ಲಲಿತಕಲೆಗಳ ನಿಕಾಯದ ಡೀನ್‌ ಡಾ. ಶಿವಾನಂದ ವಿರಕ್ತಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಶೋಧನೆ ಗಂಭೀರತೆ ಇರಬೇಕು. ಕನ್ನಡ ವಿಶ್ವವಿದ್ಯಾಲಯದ ಜ್ಞಾನಶಿಸ್ತು ಪ್ರತಿನಿತ್ಯ ಹೊಸ ಚಿಂತನೆಗಳನ್ನು ನೀಡುತ್ತಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯವು ಸಂಶೋಧಕರ ಮನಸ್ಸನ್ನು ತೀಕ್ಷ್ಣಗೊಳಿಸುವುದರ ಜೊತೆಗೆ ಅವರಿಗೆ ರೆಕ್ಕೆ-ಪುಕ್ಕಗಳನ್ನು ಕಟ್ಟುವ ಕಾರ್ಯ ಮಾಡುತ್ತಿದೆ. ಸಂಶೋಧನೆಯಲ್ಲಿ ಇರುವ ವಿಧಾನಾತ್ಮಕ ಕೊರತೆಗಳನ್ನು ಗುರುತಿಸಿ, ಅದಕ್ಕೆ ಪೂರಕ ಪರಿಹಾರಗಳನ್ನು ಕಂಡುಕೊಳ್ಳುವ ದಾರಿಯನ್ನು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ತೋರಿಸುತ್ತಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ ಯತಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪತ್ರಿಕೋದ್ಯಮ ವಿಭಾಗದ ಅಧ್ಯಾಪಕಿ ಪದ್ಮಾವತಿ ಕೆ., ಅಧ್ಯಯನಾಂಗದ ಅಧೀಕ್ಷಕ ಲಕ್ಷ್ಮಣ ಮಹಾಮುನಿ ನಿರ್ವಹಿಸಿದರು.