ಸಾರಾಂಶ
- ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಮಹಿಳಾ ಘಟಕ ವಾರ್ಷಿಕೋತ್ಸವ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಮಕ್ಕಳಲ್ಲಿ ಹೃದಯ ಶ್ರೀಮಂತಿಕೆ, ಧಾರ್ಮಿಕ ಶ್ರೀಮಂತಿಕೆ, ಸಾಹಿತ್ಯಿಕ ಶ್ರೀಮಂತಿಕೆ ಬಿತ್ತುವ ಮೂಲಕ ನಾಡಿನ ಆಸ್ತಿಯಾಗಿ ಬೆಳೆಸುವ ಹೊಣೆಗಾರಿಕೆ ಪ್ರತಿ ಮನೆಯಿಂದ, ಪ್ರತಿಯೊಬ್ಬ ಪಾಲಕರಿಂದಲೂ ಆಗಬೇಕು ಎಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ನಿವೃತ್ತ ಕಾರ್ಯದರ್ಶಿ ಎಂ.ಕೆ.ಬಕ್ಕಪ್ಪ ಹೇಳಿದರು.
ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಹಿರೇಮಠದಲ್ಲಿ ಶನಿವಾರ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಮಹಿಳಾ ಘಟಕ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿ, ಧಾರ್ಮಿಕತೆಯ ಅರಿವು ಮೂಡಿಸಬೇಕಾಗಿದೆ ಎಂದರು.ಕೇವಲ ಪಠ್ಯ ಪುಸ್ತಕಗಳಿಗಷ್ಟೇ ಮಕ್ಕಳನ್ನು ಸೀಮಿತಗೊಳಿಸದೇ, ಮನೆತನದ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆಯೂ ತಿಳಿವಳಿಕೆ ನೀಡಬೇಕು. ಹಬ್ಬ, ಆಚರಣೆಗಳ ಹಿನ್ನೆಲೆ, ಮಹತ್ವದ ಬಗ್ಗೆಯೂ ತಿಳಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಹಿಂದೆಲ್ಲಾ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ಶಿಕ್ಷಕರು ದಂಡಿಸುತ್ತಿದ್ದರು. ಆದರೆ, ಇದು ಪೊಲೀಸರೇ ಮಕ್ಕಳನ್ನು ದಂಡಿಸುವ ಸ್ಥಿತಿ ಬಂದಿರುವುದು ದುರಂತ. ಹಾಗಾಗಿ, ಮಕ್ಕಳಲ್ಲಿ ಸಂಸ್ಕಾರ, ಸದ್ಗುಣ ಕಲಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮಹಿಳೆಯೆಂದರೆ ಕೇವಲ ನಾಲ್ಕು ಗೋಡೆಗೆ ಸೀಮಿತ, ಅಡುಗೆ ಮನೆಗಷ್ಟೇ ಸೀಮಿತವೆಂಬ ಕಾಲ ಇತ್ತು. ಈಗ ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯ ಹೆಜ್ಜೆ ಗುರುತು ಇದೆ. ಪುರುಷರಿಗೆ ಸರಿಸಮಾನವಾಗಿ ಪ್ರತಿ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಶ್ಲಾಘನೀಯ. ಜಿಲ್ಲೆಯಲ್ಲೂ ಮಹಿಳೆಯರು ಅತ್ಯುತ್ತಮ, ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ತೊಟ್ಟಿಲು ತೂಗುವ ಕೈಗಳು ದೇಶವನ್ನೂ ಆಳಬಲ್ಲದು ಎಂಬುದನ್ನು ಮಹಿಳೆ ಸಾಬೀತುಪಡಿಸಿ ತೋರಿಸಿದ್ದಾಳೆ ಎಂದು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಸಮಿತಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸೌಮ್ಯ ಸತೀಶ ಧಾರವಾಡ, ವರ್ಷದ ಹಿಂದೆ ಆರಂಭವಾದ ಮಹಿಳಾ ಘಟಕವು ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜಮುಖಿ, ಪರಿಸರಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಗುರುಗಳಾದ ಪುಟ್ಟರಾಜರ ಸ್ಮರಣೆಯಲ್ಲಿ ನಾವು ಸಹ ಸೇವೆಗೆ ತೊಡಗಿದ್ದೇವೆ. ಸಮಿತಿ ರಾಜ್ಯ ಸಮಿತಿ ಅನುಮತಿ ಮೇರೆಗೆ ವರ್ಷದ ಹಿಂದೆ ಆರಂಭಿಸಿದ ಮಹಿಳಾ ಘಟಕದ ಚಟುವಟಿಕೆಗಳು ಸಮಾಜಕ್ಕೂ ಮಾದರಿಯಾಗಿವೆ ಎಂಬ ಹೆಮ್ಮೆ ಇದೆ ಎಂದರು.
ಚಿನ್ನಮ್ಮ ಅವರಿಗೆ ಸನ್ಮಾನಿಸಲಾಯಿತು. ಹಿರಿಯ ಸಮಾಜ ಸೇವಕರಾದ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ನೀಲಗುಂದ ಜಯಮ್ಮ, ಸಮಿತಿ ಪ್ರಧಾನ ಕಾರ್ಯದರ್ಶಿ ಮಮತಾ ನಾಗರಾಜ, ಶಿವಬಸವಯ್ಯ ಚರಂತಿಮಠ, ಮಧುಮತಿ ಗಿರೀಶ, ಶಾಂತಾ ಶಿವಶಂಕರ, ರಾಜಶ್ರೀ ರಮೇಶ, ಜ್ಯೋತಿ ಬೆಳಗಾವಿ, ಲತಾ ಕಪ್ಪಾಳಿ, ಶಿವಬಸವ ಸ್ವಾಮಿ, ಸುಮಾ ಬೇತೂರು, ರೇಖಾ ಬೇತೂರು ಇತರರು ಇದ್ದರು.- - -
ಕೋಟ್ ಕುಟುಂಬ ನಿರ್ವಹಣೆ ಜೊತೆ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಸೌಮ್ಯ ಸತೀಶ ಮತ್ತು ತಂಡದ ಕೆಲಸ ಇತರರಿದೂ ಮಾದರಿಯಾಗಿದೆ. ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಸಮಾಜಮುಖಿ, ಮಾನವೀಯ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೈ ಜೋಡಿಸಬೇಕು- ಎಂ.ಕೆ.ಬಕ್ಕಪ್ಪ, ನಿವೃತ್ತ ಕಾರ್ಯದರ್ಶಿ, ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ
- - - -22ಕೆಡಿವಿಜಿ1:ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಮಹಿಳಾ ಘಟಕದ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಿನ್ನಮ್ಮ ಅವರಿಗೆ ಸನ್ಮಾನಿಸಲಾಯಿತು.