ಸಂಸ್ಕೃತಿ ಅನ್ನುವುದೇ ರಾಜಕೀಯ ಪರಿಭಾಷೆಯಾಗಿದೆ. ಸಾಂಸ್ಕೃತಿಕ ರಾಜಕಾರಣ ಹಳೆ ಮತ್ತು ಹೊಸ ನಂಬಿಕೆಗಳನ್ನು ಮುಂದುವರೆಸುತ್ತಿದೆ ಎಂದು ಚಿಂತಕ ರಹಮತ್ ತರೀಕೆರೆ ಹೇಳಿದರು.

ಚಿತ್ರದುರ್ಗ: ಸಂಸ್ಕೃತಿ ಅನ್ನುವುದೇ ರಾಜಕೀಯ ಪರಿಭಾಷೆಯಾಗಿದೆ. ಸಾಂಸ್ಕೃತಿಕ ರಾಜಕಾರಣ ಹಳೆ ಮತ್ತು ಹೊಸ ನಂಬಿಕೆಗಳನ್ನು ಮುಂದುವರೆಸುತ್ತಿದೆ ಎಂದು ಚಿಂತಕ ರಹಮತ್ ತರೀಕೆರೆ ಹೇಳಿದರು. ಎದ್ದೇಳು ಕರ್ನಾಟಕ, ನಾಡು ನುಡಿ ಬಳಗ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಂಬೇಡ್ಕರ್ ವಿಚಾರ ವೇದಿಕೆ ಸಹಯೋಗದೊಂದಿಗೆ ಚಿತ್ರದುರ್ಗ ಹೊರವಲಯ ಧಮ್ಮ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅರಿವಿನ ಚಾವಡಿಯಲ್ಲಿ ನಾಗರಿಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ ವಿಷಯ ಕುರಿತು ಮಾತನಾಡಿದ ಅವರು, ಸಾಮಾಜಿಕ ಚಳುವಳಿಗಳ ಹಿಂದೆ ಸಂತರಿದ್ದಾರೆ. ಹೊಸ ಸಾಂಸ್ಕೃತಿಕ ಪದ್ಧತಿಯನ್ನು ಹುಟ್ಟು ಹಾಕುವುದು ಚಳುವಳಿಯ ಮುಖ್ಯ ಭಾಗ ಎಂದರು.ಪ್ರಗತಿಪರರು, ಪ್ರತಿಗಾಮಿಗಳು ಸಾಂಸ್ಕೃತಿಕ ರಾಜಕಾರಣ ಮಾಡುತ್ತಾರೆ. ಧರ್ಮ, ಭಾಷೆ, ನಂಬಿಕೆ, ಪರಂಪರೆ ಇವುಗಳನ್ನೆಲ್ಲಾ ಭಾವನಾತ್ಮಕ ಸಂಬಂಧಗಳಿಗೆ ಬಳಸಿಕೊಂಡು ಜನರನ್ನು ಸಂಘಟಿಸಬಹುದು, ವಿಭಜಿಸಲೂಬಹುದು. ಓಬವ್ವ, ಟಿಪ್ಪು, ಕಿತ್ತೂರುರಾಣಿ ಚೆನ್ನಮ್ಮ, ಇವರುಗಳ ಹೆಸರುಗಳನ್ನು ಬಳಸಿಕೊಂಡು ಸಾಂಸ್ಕೃತಿಕ ರಾಜಕಾರಣ ಕಟ್ಟಲಾಗುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಸಾಂಸ್ಕೃತಿಕ ರಾಜಕಾರಣ ಮಾಡುತ್ತಿರುವುದು ಹೊಸದೇನಲ್ಲ ಎಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಕಲಾ ಪ್ರಕಾರಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಸಾಂಸ್ಕೃತಿಕ ರಾಜಕೀಯ ಹೋರಾಟಕ್ಕೆ ಶಕ್ತಿ ಕೊಡುವ ಆಕಾರಗಳಿವೆ. ಸಾಮಾಜಿಕ ಸಮಾನತೆಗಾಗಿ ಬಾಬಾ ಸಾಹೇಬರ ಹೋರಾಟವಾಗಿತ್ತು. ಕೋರೆಗಾಂವ್ ರಾಜಕೀಯಕ್ಕೆ ಸಂಬಂಧಿಸಿದುದಾಗಿದ್ದು ಪ್ರಾರ್ಥನೆ, ಉಪ್ಪು, ಚರಕ ಇವುಗಳು ಗಾಂಧಿಜಿಯವರದಾಗಿತ್ತು. ಕೋಮುವಾದ, ಮತಾಂತರ, ಹೆಸರುಗಳ ಬದಲಾವಣೆ, ಸ್ಮಾರಕಗಳ ನಾಶ, ದೀರ್ಘಕಾಲದ ರಾಜಕಾರಣ ಹೊಸ ಆಚರಣೆಗಳ ಸೃಷ್ಟಿಯಾಗಿದೆ. ಸಾಂಸ್ಕೃತಿಕ ಚಳುವಳಿ ಅಭಿಯಾನ ಕರ್ನಾಟಕದ ಚಳುವಳಿಗಿದೆ ಎಂದರು.

ಡಾ.ದೊಡ್ಡಮಲ್ಲಯ್ಯ, ಡಾ.ಮಮತ ಅವರುಗಳು ರಹಮತ್ ತರೀಕೆರೆ ಅವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.ಸಂವಿಧಾನದ ಮುಂದಿರುವ ಸವಾಲುಗಳು ಕುರಿತು ಮಾತನಾಡಿದ ಎ.ನಾರಾಯಣ, ಸಂವಿಧಾನ ವಿರೋಧಿಸುತ್ತಿರುವವರ ಕೈಯಲ್ಲಿ ದೈತ್ಯ ರಾಜಕೀಯ ಬಲವಿರುವುದರಿಂದ ಸಂವಿಧಾನಕ್ಕೆ ದೊಡ್ಡ ಪ್ರಮಾಣದ ಅಪಾಯ, ಸವಾಲು ಎದುರಾಗಿದೆ. ಸಮಾನತೆ ಎನ್ನುವುದು ದೂರದ ಮಾತಾಗಿದೆ ಎಂದರು. ಸಂವಿಧಾನದ ಮುಂದೆ ಸವಾಲಿದೆ. ಗಾಂಧಿ ಮೇಲಿನ ಗುಂಡು ಕೇವಲ ನೆಪ ಮಾತ್ರ. ಸಂವಿಧಾನ ಜಾರಿಯಾಗುವುದಕ್ಕಿಂತ ಮುಂಚೆ ದಾಳಿಯಾಯಿತು. ಎಲ್ಲರೂ ಸಂವಿಧಾನ ಉಳಿಸಿಕೊಳ್ಳುವ ಪ್ರಶ್ನೆ ಹಾಕಿಕೊಳ್ಳಬೇಕು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಿರುವು ಕೊಟ್ಟರು. ದೇಶದಲ್ಲಿ ಧೃತರಾಷ್ಟ್ರ ಆಲಿಂಗನ ಕೆಲಸ ನಡೆಯುತ್ತಿದೆ. ಸಂವಿಧಾನ ರಕ್ಷಣೆ ಎನ್ನುವುದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಿದ್ದಂತೆ. ವಸಂವಿಧಾನ ವಿರೋಧಿಗಳು ಕ್ಷಣ ಕ್ಷಣಕ್ಕೂ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವುದನ್ನು ಗಮನಿಸಿದರೆ ಸಂವಿಧಾನ ಅಪಾಯದಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಜೆ.ಯಾದವರೆಡ್ಡಿ ಪ್ರತಿಕ್ರಿಯೆ ನೀಡಿದರು.